ಬಂಟ್ವಾಳ: ಪತ್ರಕರ್ತ ಫಾರೂಕ್ಗೂಡಿನ ಬಳಿ ಶುಕ್ರವಾರ ಸಂಜೆ ನಿಧನರಾದರು. ಕಳೆದ ಹಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಫಾರೂಕ್ ಅವರು ಕೆಲ ಸಮಯಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಮನೆಯಲ್ಲಿಯೇ ವಿಶ್ರಾಂತಿಯಲ್ಲಿದ್ದರು. ಪ್ರಸ್ತುತ ದಿನಗಳಲ್ಲಿ ರೋಗ ಉಲ್ಭಣಿಸಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ವಿಜಯ ಕರ್ನಾಟಕ, ಉಷಾಕಿರಣ, ಜಯಕಿರಣ, ವಂಶ ಪತ್ರಿಕೆಗಳ ವರದಿಗಾರ ಕರ್ತವ್ಯ ನಿರ್ವಹಿಸಿದ್ದ ಫಾರೂಕ್, ಬಂಟ್ವಾಳ ಪತ್ರಕರ್ತರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಕವಿ ಹೃದಯದ ಫಾರೂಕ್ ಅವರು ಲೇಖನ, ಕವನಗಳನ್ನು ಬರೆಯುತ್ತಿದ್ದು ಹಲವಾರು ಸಾಹಿತ್ಯ ಸಮ್ಮೇಳನಗಳಲ್ಲಿ ತನ್ನ ಕವನಗಳನ್ನು ವಾಚನ ಮಾಡಿದ್ದಾರೆ. ಗ್ರಾಪಂ.ಸದಸ್ಯರಿಗೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಹಕ್ಕು ಮತ್ತು ಕರ್ತವ್ಯದ ಬಗ್ಗೆ ಹಾಗೂ ಮಕ್ಕಳ ಹಕ್ಕಿನ ಬಗ್ಗೆಯು ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದರಲ್ಲದೆ ಸಾಮಾಜಿಕ ಚಟುವಟಿಕೆಯಲ್ಲಿಯು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದರು. ಮೃತರು ಪತ್ನಿ, ಪುತ್ರಿ, ತಾಯಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.