ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದ.ಕ. ಜಿಲ್ಲೆ ಹಾಗೂ ರೋಟರಿ ಕ್ಲಬ್ ಮೊಡಂಕಾಪು ಇದರ ಸಹಯೋಗದೊಂದಿಗೆ 115 ನೇ ರಕ್ತದಾನ ಶಿಬಿರ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ಭಾನುವಾರ ನಡೆಯಿತು.
ರೋಟರಿ ಕ್ಲಬ್ ಬಂಟ್ವಾಳದ ಪೂರ್ವಾಧ್ಯಕ್ಷ, ಉದ್ಯಮಿ ಸಂಜೀವ ಪೂಜಾರಿ ಶಿಬಿರ ಉದ್ಘಾಟಿಸಿದರು. ಅವರು ಮಾತನಾಡಿ ತುರ್ತು ಸಂದರ್ಭದಲ್ಲಿ ಆರೋಗ್ಯ ಉಳಿಸಲು ಅನಿವಾರ್ಯವಾಗಿರುವ ರಕ್ತವನ್ನು ನಿರಂತರ ಶಿಬಿರಗಳ ಮೂಲಕ ಕೃಷ್ಣ ಕುಮಾರ್ ಪೂಂಜ ಅವರ ನೇತೃತ್ವದಲ್ಲಿ ಸೇವಾಂಜಲಿ ಸಂಸ್ಥೆ ನಡೆಸಿಕೊಂಡು ಬರುತ್ತಿರುವುದು ಅಭಿನಂದನೀಯ ಎಂದರು.
ಮುಖ್ಯ ಅತಿಥಿ ಇಂಡಿಯನ್ ರೆಡ್ಕ್ರಾಸ್ ಬ್ಲಡ್ ಬ್ಯಾಂಕಿನ ಜಿಲ್ಲಾ ಸಂಯೋಜಕ ಪ್ರವೀಣ್ ಮಾತನಾಡಿ ಬ್ಲಡ್ ಬ್ಯಾಂಕ್ ಎನ್ನುವುದು ದೇಶದ ನಿಜವಾದ ಭಾವೈಕ್ಯತೆಯ ತಾಣ ಇದ್ದಂತೆ. ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರ ರಕ್ತವೂ ಬ್ಲಡ್ ಬ್ಯಾಂಕಿನಲ್ಲಿ ಸಂಗ್ರಹಗೊಂಡಿರುತ್ತದೆ ಎಂದ ಅವರು ಸೇವಾಂಜಲಿ ಪ್ರತಿಷ್ಠಾನ 115 ರಕ್ತದಾನ ಶಿಬಿರ ಆಯೋಜಿಸಿರುವುದು ದೊಡ್ಡ ಸಾಧನೆ ಎಂದು ತಿಳಿಸಿದರು.
ರೋಟರಿ ಕ್ಲಬ್ ಬಂಟ್ವಾಳದ ನಿಕಟಪೂರ್ವ ಕಾರ್ಯದರ್ಶಿ ವಾಣಿ ಪ್ರಕಾಶ್ ಕಾರಂತ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ಮೊಡಂಕಾಪಿನ ಕಾರ್ಯದರ್ಶಿ ಪಿ.ಎ. ರಹೀಂ, ಸೇವಾಂಜಲಿ ಆರೋಗ್ಯ ಕೇಂದ್ರದ ವೈದ್ಯ ಡಾ. ಚೇತನ್, ಟ್ರಸ್ಟಿ ಜಯ ಕರ್ಕೆರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿ ಸದಾನಂದ ಆಳ್ವ ಕಂಪ ಸ್ವಾಗತಿಸಿದರು. ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ವಂದಿಸಿದರು. ಡಾ. ರಾಮಕೃಷ್ಣ ಎಸ್. ಮೊದಲಾದವರು ರಕ್ತದಾನ ಮಾಡಿದರು.
ರೋಟರಿ ಕ್ಲಬ್ ಮೊಡಂಕಾಪುವಿನ ಸದಸ್ಯ ಯೂಸುಫ್, ಸೇವಾಂಜಲಿ ಪ್ರತಿಷ್ಠಾನದ ಬಡ್ಡೂರು ನಾರಾಯಣ, ಸುಕೇಶ್ ಶೆಟ್ಟಿ ತೇವು, ಪ್ರಕಾಶ್ ಕಿದೆಬೆಟ್ಟು, ಪ್ರಶಾಂತ್, ವಿಕ್ರಮ್ ಬರ್ಕೆ, ಸುರೇಶ್ ರೈ ಪೆಲಪಾಡಿ, ಭಾಸ್ಕರ ಚೌಟ, ನಾಗಪ್ಪ ಶೆಟ್ಟಿ, ಎಂ.ಕೆ. ಖಾದರ್, ಮನೋಜ್ ತುಪ್ಪೆಕಲ್ಲು, ಕೇಶವ ದೋಟ, ಉಮಾ ಚಂದ್ರಶೇಖರ್, ವಿದ್ಯಾವತಿ ಸುಜೀರ್ ಗಾಯತ್ರಿ ಚಿದಾನಂದ, ದಿನೇಶ್ ತುಂಬೆ, ಮೋಹನ್ ಬೆಂಜನಪದವು, ಅರ್ಜುನ್ ಪೂಂಜಾ, ಸುನೀಲ್ ಫೆರ್ನಾಂಡೀಸ್
ಮೊದಲಾದವರು ಸಹಕರಿಸಿದರು.