ಬಂಟ್ವಾಳ: ರೋಟರಿ ಕ್ಲಬ್ ಫರಂಗಿಪೇಟೆಯ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮಂಗಳವಾರ ಸಂಜೆ ಫರಂಗಿಪೇಟೆಯ ಲೋಬೋ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.
ನಿರ್ಗಮನ ಅಧ್ಯಕ್ಷ ರಮೇಶ್ ತುಂಬೆ ಮಾತನಾಡಿ ರೋಟರಿ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಳ್ಳಲು ಪ್ರೇರಣೆ ನೀಡುತ್ತದೆ. ಸಮಾಜದಿಂದ ನಾವೇನು ಪಡೆದಿರುತ್ತೇವೆಯೋ ಮತ್ತೆ ಅದನ್ನು ಸಮಾಜಕ್ಕೆ ಮರಳಿಸುವ ಅವಕಾಶವನ್ನು ರೋಟರಿ ಸಂಸ್ಥೆ ಮಾಡುತ್ತದೆ ಎಂದು ತಿಳಿಸಿದರು. ನಿಯೋಜಿತ ಜಿಲ್ಲಾ ಗವರ್ನರ್ ಎನ್.ಪ್ರಕಾಶ್ ಕಾರಂತ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಭೋದಿಸಿದರು. ನೂತನ ಅಧ್ಯಕ್ಷರಾಗಿ ಅಡ್ಯಾರ್ ಗುತ್ತು ಸುರೇಂದ್ರ ಎ.ಕಂಬಳಿ, ಕಾರ್ಯದರ್ಶಿಯಾಗಿ ದಿನೇಶ್ ಶೆಟ್ಟಿ ಕೊಟ್ಟಿಂಜ, ಕೋಶಾಧಿಕಾರಿಯಾಗಿ ರಮೇಶ್ ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ನೂತನ ಅಧ್ಯಕ್ಷ ಸುರೇಂದ್ರ ಕಂಬಳಿ ಮಾತನಾಡಿ ಎಲ್ಲರ ಸಹಕಾರದೊಂದಿಗೆ ಸಮಾಜ ಸೇವೆ ಮಾಡುವ ಅವಕಾಶ ರೋಟರಿ ಸಂಸ್ಥೆಯಿಂದ ಸಿಕ್ಕಿದ್ದು ತನ್ನ ಅಧಿಕಾರವಧಿಯಲ್ಲಿ ಎಲ್ಲಾ ಸದಸ್ಯರನ್ನು ಜೊತೆ ಸೇರಿಸಿಕೊಂಡು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಇದೇ ಸಂದರ್ಭ ನಿರ್ಗಮನ ಅಧ್ಯಕ್ಷ ರಮೇಶ್ ತುಂಬೆ, ನೂತನ ಅಧ್ಯಕ್ಷ ಸುರೇಂದ್ರ ಕಂಬಳಿ, ಚುನಾಯಿತ ಅಧ್ಯಕ್ಷ ನೋರ್ಬರ್ಟ್ ಡಿಸೋಜಾ ಅವರನ್ನು ಸನ್ಮಾನಿಸಲಾಯಿತು. ನೂತನ ಸದಸ್ಯರನ್ನು ಕ್ಲಬ್ ಗೆ ಸೇರಿಸಿಕೊಳ್ಳಲಾಯಿತು. ಮುಖ್ಯ ಅತಿಥಿ ಸಹಾಯಕ ಗವರ್ನರ್ ಸುರೇಂದ್ರ ಕಿಣಿ ಮಾತನಾಡಿ ಅಧಿಕಾರ ಎನ್ನುವುದಕ್ಕಿಂತಲೂ ಕರ್ತವ್ಯ ಎನ್ನುವ ರೀತಿಯಲ್ಲಿ ಕಾರ್ಯ ನಿರತರಾದಾಗ ರೋಟರಿಯಲ್ಲಿ ಜನ ಮನ್ನಣೆ ಪಡೆಯಲು ಸಾಧ್ಯವಿದೆ ಎಂದರು. ಪದಗ್ರಹಣ ಅಧಿಕಾರಿ ಎನ್. ಪ್ರಕಾಶ್ ಕಾರಂತ್ ಮತನಾಡಿ ಸದಸ್ಯತನ ಹೆಚ್ಚಾದಂತೆ ರೋಟರಿ ಸಂಸ್ಥೆ ಸದೃಡವಾಗುತ್ತದೆ. ೩೦ ಸಾವಿರ ಡಾಲರ್ ರೂಫಾಯಿ ಸದಸ್ಯತ್ವ ಮೊತ್ತ ರೋಟರಿ ಸಂಸ್ಥೆಗೆ ಬಂಟ್ವಾಳದ ೬ ಕ್ಲಬ್ ಗಳಿಂದ ಸಂದಾಯವಾಗುತ್ತಿದೆ. ಆಪತ್ತಿಗೆ, ಮಾನವೀಯ ಕಾರ್ಯಗಳಿಗೆ, ಸೇವಾ ಕಾರ್ಯಗಳಿಗೆ ರೋಟರಿಯ ದೇಣಿಗೆ ಮೊತ್ತ ಸಲ್ಲುತ್ತದೆ ಎಂದರು. ವಲಯ ಕಾರ್ಯದರ್ಶಿ ಜಯರಾಮ ರೈ ಸ್ಥಾಪಕಾಧ್ಯಕ್ಷ ಜಯರಾಂ ಶೇಖ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಅರ್ಜುನ್ ಪೂಂಜ ಗತವರ್ಷದ ವರದಿ ವಾಚಿಸಿದರು. ನೂತನ ಕಾರ್ಯದರ್ಶಿ ದಿನೇಶ್ ಶೆಟ್ಟಿ ಕೊಟ್ಟಿಂಜ ವಂದಿಸಿದರು. ಸದಸ್ಯೆ ಶಾಂತಿ ರೋಚ್ ಕಾರ್ಯಕ್ರಮ ನಿರೂಪಿಸಿದರು.