ಬಂಟ್ವಾಳ: ಸೌರ ವಿದ್ಯುತ್ ಮೂಲಕ ಮನೆ ಮನೆಗೆ ಬೆಳಕು ನೀಡುತ್ತಿದ್ದ ಸೆಲ್ಕೋ ಸೋಲಾರ್ ಸಂಸ್ಥೆ ಆರೋಗ್ಯ ಸೇವೆ ನೀಡುವ ಮೂಲಕ ಜನರ ಬದುಕಿಗೂ ಬೆಳಕಾಗಿದೆ. ಸೋಲಾರ್ ವ್ಯವಸ್ಥೆಯಲ್ಲಿ ಕ್ರಾಂತಿಯನ್ನು ಸೃಷ್ಟಿಸಿದ್ದಲ್ಲದೆ ಹೊಸ ಹೊಸ ಆವಿಷ್ಠಾರಗಳೊಂದಿಗೆ ಜನ ಸಾಮಾನ್ಯರಿಗೂ ಕೈಗೆಟಕುವ ದರದಲ್ಲಿ ಸೋಲಾರ್ ಯಂತ್ರಗಳನ್ನು ಪೂರೈಸುತ್ತಿದ್ದ ಸೆಲ್ಕೊ ಸಂಸ್ಥೆ ಆರೋಗ್ಯ ಸೇವೆ ನೀಡುವ ವಿಶಿಷ್ಠ ಯೋಜನೆಗೆ ಮುನ್ನುಡಿ ಬರೆದಿದೆ. ಯಾವುದೋ ಕಾರಣಕ್ಕೆ ಆಕಷ್ಮಿಕ ಅವಘಡಗಳಿಗೆ ತುತ್ತಾಗಿ ಜೀವನವೇ ಮುಗಿದು ಹೋಯಿತು ಎನ್ನುವ ಜೀವಗಳನ್ನು ಮತ್ತೆ ಮುಖ್ಯವಾಹಿನಿಗೆ ತರುವ ಮಾನವೀಯ ಕಾರ್ಯವನ್ನು ಸೆಲ್ಕೊ ಸೋಲಾರ್ ಸಂಸ್ಥೆ ಸದ್ದಿಲ್ಲದೆ ಮಾಡುತ್ತಿದೆ.
ದೇಶದ ಆರೋಗ್ಯ ಕ್ಷೇತ್ರ ಹಲವಾರು ಸವಾಲುಗಳೊಂದಿಗೆ ಮುನ್ನಡೆಯುತ್ತಿದೆ. ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಬೇಕೆನ್ನುವ ಸದುದ್ದೇಶದಿಂದ ಸೆಲ್ಕೋ ಸಂಸ್ಥೆ ಆರೋಗ್ಯ ಕೆಂದ್ರಗಳನ್ನು ಸಶಕ್ತೀಕರಣಗೊಳಿಸುವತ್ತ ಗಮನ ಹರಿಸಿದೆ. ಮೂಲಭೂತ ಆರೋಗ್ಯ ಸೇವೆಗಾಗಿ ಹಲವಾರು ಪರಿಹಾರ ಸೂತ್ರ ಅಭಿವೃದ್ದಿಗೊಳಿಸುವ ಮೂಲಕ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಪ್ರಯತ್ನಿಸುತ್ತಿದೆ. ಸೆಲ್ಕೋ ಸಂಸ್ಥೆ ದೇಶಾದ್ಯಂತ ೧೫೨೦ ಸೌರಶಕ್ತಿ ಆಧಾರಿತ ಆರೋಗ್ಯ ಸೇವಾ ಕೇಂದ್ರಗಳನ್ನು ರೂಪಿಸಿದರೆ ಕರ್ನಾಟಕ ರಾಜ್ಯವೊಂದರಲ್ಲೇ ಸುಮಾರು ೧೬೦ ಸೌರ ಶಕ್ತಿ ಆಧಾರಿತ ಆರೋಗ್ಯ ಕೇಂದ್ರಗಳನ್ನು ರೂಪಿಸಿ ಅತ್ಯವಶ್ಯಕ ಆರೋಗ್ಯ ಸೇವೆಗಾಗಿ ಉಪಕರಣಗಳನ್ನು ಸೆಲ್ಕೊ ಒದಗಿಸಿದೆ. ಹಲವಾರು ಎನ್ಜಿಓ ಮತ್ತು ಪ್ರಾದೇಶಿಕ ಸರ್ಕಾರಿ ಸಂಸ್ಥೆಗಳ ಜೊತೆ ಕೈ ಜೋಡಿಸಿ ಆರೋಗ್ಯ ಕೇಂದ್ರಗಳನ್ನು ಅಭಿವೃದ್ದಿಗೊಳಿಸಿ ಗ್ರಾಮೀಣ ಸಮುದಾಯಗಳಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವಲ್ಲಿ ಕೆಲಸ ಮಾಡುತ್ತಿದೆ.
ತಾಯಂದಿರು ಮತ್ತು ಮಗುವಿನ ಆರೈಕೆಗಾಗಿ ಸಂಚಾರಿ ಕಿಟ್ ಒದಗಿಸಲಾಗುತ್ತಿದೆ. ಕಿಟ್ನಲ್ಲಿ ಅವಶ್ಯ ಉಪಕರಣಗಳಿದ್ದು ಮನೆ ಬಾಗಿಲಿನಲ್ಲಿಯೇ ಅವಶ್ಯ ಸೇವೆ ನೀಡಲು ಇದರಿಂದ ಸಾಧ್ಯವಿದೆ. ಅನಿಮೀಯಾ, ಬ್ಲಡ್ ಶುಗರ್ ಲೆವೆಲ್, ಯೂರಿನ್ ಅಲ್ಬಮಿನ್, ಮಲೇರಿಯಾ ಟೆಸ್ಟ್ ಮಾಡುವಂತಹ ಕಿಟ್ಗಳು ಇದೆ. ಇವೆಲ್ಲವೂ ಸೌರಶಕ್ತಿ ಆಧಾರಿತವಾಗಿ ಕೆಲಸ ಮಾಡುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೌರ ಆಧಾರಿತ ವ್ಯವಸ್ಥೆಗಳನ್ನು ಅಳವಡಿಸಿಕೊಂಡ ಬಳಿಕ ತಾಯಂದಿರು ಮತ್ತು ನವಜಾತ ಶಿಶುಗಳ ಮರಣ ಪ್ರಮಾಣ ಗಣನೀಯವಾಗಿ ಇಳಿದಿದೆ. ಕೋಲ್ಡ್ ಚೈನ್, ಪ್ರಸೂತಿ ವ್ಯವಸ್ಥೆ, ಫಾರ್ಮಸಿ, ಪ್ರಯೋಗಾಲಯಗಳಲ್ಲಿ ಸೋಲಾರ್ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲಾಗಿದೆ.
ಕೋವಿಡ್ ತುರ್ತು ಪರಿಸಿತಿಯ ಸಂದರ್ಭದಲ್ಲಿ ಸೆಲ್ಕೋ ಸಂಸ್ಥೆಯು ರಾಯಚೂರು, ಚಿತ್ರದುರ್ಗ ಮತ್ತು ಬೆಳಗಾವಿಯಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ಗಳನ್ನು ಒದಗಿಸಿದೆ. ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕೋವಿಡ್ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿದೆ. ಅಂಗನವಾಡಿ ಕೆಂದ್ರಗಳಲ್ಲಿ ಸೌರಶಕ್ತಿ ಉತ್ಪನ್ನಗಳನ್ನು ಅಳವಡಿಸುವ ಮೂಲಕ ಸೆಲ್ಕೋ ತಳಮಟ್ಟದಲ್ಲಿ ಮೂಲಸೌಕರ್ಯ ಸುಧಾರಿಸುವ ಪ್ರಯತ್ನಗಳನ್ನು ನಡೆಸಿದೆ. ಇಷ್ಟೇ ಅಲ್ಲದೆ ಬೆನ್ನು ಮೂಳೆ ಸಮಸ್ಯೆ ಇರುವವರಿಗೆ ಸೌರ ಶಕ್ತಿ ಆಧಾರಿತ ಹಾಸಿಗೆಯನ್ನು ಸಿದ್ದಗೊಳಿಸಿದೆ. ಹೀಗೆ ಆರೋಗ್ಯ ಕೇಂದ್ರದಲ್ಲಿ ಸೆಲ್ಕೋ ಸಂಸ್ಥೆ ತನ್ನದೆ ಸುಧಾರಿತ ವಿಧಾನಗಳನ್ನು ಅಳವಡಿಸಿಕೊಂಡು ಸೇವಾ ಕಾರ್ಯದಲ್ಲೂ ತೊಡಗಿಸಿಕೊಂಡಿದೆ.