ಬಂಟ್ವಾಳ: ದ.ಕ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ ಬಂಟ್ವಾಳ ವಲಯ, ಕಾರ್ಮಿಕ ಇಲಾಖೆ ಬೆಂಗಳೂರು ಹಾಗೂ ದ.ಕ. ಜಿಲ್ಲಾ ಸಾಮಾಜಿಕ ಭದ್ರತಾ ಮಂಡಳಿ ಇದರ ಸಹಯೋಗದೊಂದಿಗೆ ಮೆಕಾನಿಕ್ ವೃತ್ತಿ ಬಾಂದವರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ ಕಾರ್ಯಕ್ರಮ ಬಿ.ಸಿ. ರೋಡಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆಯಿತು.
ಶಾಸಕ ರಾಜೇಶ್ ನಾಕ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಈವರೆಗೆ ಒಟ್ಟು 9500 ಆಹಾರದ ಕಿಟ್ ಬಂದಿದೆ. ಇನ್ನೂ 3 ಸಾವಿರ ಕಿಟ್ ಬರಲಿದೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲು ತಮ್ಮ ವ್ಯಾಪ್ತಿಗೆ ಸಿಕ್ಕ ಕಿಟ್ಗ್ಗಳನ್ನೂ ಇಲ್ಲಿಗೆ ನೀಡಿದ್ದಾರೆ. ಸಾಧ್ಯವಿದ್ದಷ್ಟು ಕಿಟ್ ಕೊಡಲು ಪ್ರಯತ್ನಿಸುವುದಾಗಿ ತಿಳಿಸಿದರು. ಕೋವಿಡ್ ನಿಂದಾಗಿ ದುಡಿಯುವ ವರ್ಗಕ್ಕೆ ತೊಂದರೆಯಾಗಿದ್ದು ಇಂತಹ ಸಂದಿಗ್ದಕಾಲದಲ್ಲಿ ಕಿಟ್ ಸಣ್ಣ ಕೊಡುಗೆಯಷ್ಟೇ ಎಂದರು.
ಕಾರ್ಮಿಕ ಅಧಿಕಾರಿ ಅಮರೇಂದ್ರ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಕಾರ್ಮಿಕ ನಿರೀಕ್ಷಕಿ ಮರ್ಲಿನ್ ಗ್ರೇಸಿಯಾ ಡಿಸೋಜ್ , ಗ್ಯಾರೇಜು ಮಾಲಕರ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಕುಮಾರ್, ಸಂಘದ ಅಧ್ಯಕ್ಷ ಅಣ್ಣು ಪೂಜಾರಿ, ತಾ.ಪಂ ಮಾಜಿ ಸದಸ್ಯ ಗಣೇಶ್ ಸುವರ್ಣ ಉಪಸ್ಥಿತರಿದ್ದರು. ಸದಸ್ಯ ಸುಧಾಕರ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ್ ಭಂಡಾರ್ಕಾರ್ ವಂದಿಸಿದರು.