ಬಂಟ್ವಾಳ: ಭತ್ತದ ಬೇಸಾಯ ಮಾಡುವ ಮೂಲಕ ಯುವ ಸಮುದಾಯವನ್ನು ಮತ್ತೆ ಕೃಷಿಯತ್ತ ಆಕರ್ಷಿಸುವ ಕಾರ್ಯವನ್ನು ಜೆಸಿಐ ಬಂಟ್ವಾಳ ಮಾಡುತ್ತಿದೆ ಎಂದು ಜೆಸಿಐ ವಲಯ 15ರ ವಲಯಾಧ್ಯಕ್ಷೆ ಸೌಜನ್ಯ ಹೆಗ್ಡೆ ಹೇಳಿದರು.
ಅವರು ಜೆಸಿಐ ಬಂಟ್ವಾಳದ ವತಿಯಿಂದ ಅಮ್ಟಾಡಿ ಏರ್ಯ ಬೀಡು ಬಾಲಕೃಷ್ಣ ಹೆಗ್ಡೆಯವರ ಗದ್ದೆಯಲ್ಲಿ ಆಯೋಜಿಸಿದ್ದ ಕಂಡದ ಪರ್ಬ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ. ಕೃಷ್ಣಕುಮಾರ್ ಪೂಂಜ ಮಾತನಾಡಿ ಕೃಷಿ ಎನ್ನುವುದು ತುಳುನಾಡಿನ ಜನರ ನಿತ್ಯ ಜೀವನದ ಅವಿಭಾಜ್ಯ ಅಂಗವಾಗಿತ್ತು. ಬಡವ, ಶ್ರೀಮಂತ ಎನ್ನದೆ ಪ್ರತಿಯೊಬ್ಬ ವ್ಯಕ್ತಿಯೂ ತನ್ನನ್ನು ತಾನು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ. ಕೃಷಿ ಕಾರ್ಯಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಜೆಸಿಐ ಬಂಟ್ವಾಳ ಕೈಗೊಂಡ ಈ ಕಾರ್ಯ ಅಭಿನಂದನೀಯ ಎಂದು ತಿಳಿಸಿದರು.
ಜೆಸಿಐ ಬಂಟ್ವಾಳದ ಅಧ್ಯಕ್ಷ ಉಮೇಶ್ ಆರ್. ಮೂಲ್ಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಪ್ರಗತಿಪರ ಕೃಷಿಕ ಉಮಾನಾಥ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ವಲಯಾಧಿಕಾರಿ ಯತೀಶ್ ಕರ್ಕೇರಾ, ಜೆಸಿಐ ಬಂಟ್ವಾಳದ ಕಾರ್ಯದರ್ಶಿ ರೋಷನ್ ರೈ, ಸದಸ್ಯ ಚಿತ್ತರಂಜನ್ ಶೆಟ್ಟಿ ಬೊಂಡಾಲ, ಕೃಷಿಕ ಚೆನ್ನಪ್ಪ ಅವರನ್ನು ಅಭಿನಂದಿಸಲಾಯಿತು. ವಲಯ ಉಪಾಧ್ಯಕ್ಷ ಶರತ್ ಕುಮಾರ್, ಸ್ಥಾಪಕಾಧ್ಯಕ್ಷ ನಾಗೇಶ್ ಬಾಳೆಹಿತ್ಲು, ನಿಕಟಪೂರ್ವಾಧ್ಯಕ್ಷ ಸದಾನಂದ ಬಂಗೇರ, ಜೇಸಿರೆಟ್ ಅಧ್ಯಕ್ಷೆ ವಿದ್ಯಾ ಉಮೇಶ್ ಕಾರ್ಯದರ್ಶಿ ರೋಷನ್ ರೈ ವಂದಿಸಿದರು, ಲೋಕೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಕೆಸರು ಗದ್ದೆಯಲ್ಲಿ ವಿವಿಧ ಕ್ರೀಡಾ ಚಟುವಟಿಕೆಯನ್ನು ನಡೆಸಿ ಜೆಸಿ ಸದಸ್ಯರು ಸಂಭ್ರಮಿಸಿದರು. ಬಳಿಕ ಉಳುಮೆ ಮಾಡಿ ನೇಜಿ ನಾಟಿ ಮಾಡಲಾಯಿತು.