ಬಂಟ್ವಾಳ: ಕಳ್ಳಿಗೆ ಗ್ರಾಮದ ಜಾರಂದಗುಡ್ಡೆಯಲ್ಲಿ ಜೆಸಿಐ ಬಂಟ್ವಾಳದ ನೇತೃತ್ವ, ದಾನಿಗಳ ಸಹಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳ ಶ್ರಮದಾನದ ಮೂಲಕ ನಿರ್ಮಾಣಗೊಳ್ಳುತ್ತಿರುವ ನಾಗಮಜ್ಜಿ ಮನೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 50 ಸಾವಿರ ರೂಪಾಯಿ ಮೊತ್ತದ ಆರ್ಥಿಕ ನೆರವು ಸಿಕ್ಕಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆಯವರ ಆದೇಶದ ಮೇರೆಗೆ, ಧ.ಗ್ರಾ. ಯೋ. ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ಅವರ ಸೂಚನೆಯಂತೆ ಶುಕ್ರವಾರ ಜನಾಜಾಗೃತಿ ವೇದಿಕೆ ಹಾಗೂ ವಿಪತ್ತು ನಿರ್ವಹಣಾ ಘಟಕದ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಜಾರಂದಗುಡ್ಡೆಗೆ ಭೇಟಿ ನೀಡಿ ಆರ್ಥಿಕ ನೆರವಿನ ಚೆಕ್ ಹಸ್ತಾಂತರಿಸಿದರು. ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ., ಮೇಲ್ವಿಚಾರಕಿ ಹರಿಣಾಕ್ಷಿ ರೈ, ಸೇವಾಪ್ರತಿನಿಧಿ ಭವ್ಯ, ಕಳ್ಳಿಗೆ ಗ್ರಾ.ಪಂ.ಅಧ್ಯಕ್ಷೆ ಯಶೋಧಾ, ಜೆಸಿಐ ಬಂಟ್ವಾಳದ ಕಾರ್ಯದರ್ಶಿ ರೋಶನ್ ರೈ, ನಿಕಟಪೂರ್ವಾಧ್ಯಕ್ಷ ಸದಾನಂದ ಬಂಗೇರ, ಸದಸ್ಯ ಮನೋಜ್ ಕನಪಾಡಿ, ನಾಗಮಜ್ಜಿ, ಜಯಂತಿ ಮೊದಲಾದವರು ಉಪಸ್ಥಿತರಿದ್ದರು.
ಮನೆ ನಿರ್ಮಾಣಕ್ಕೆ ಆರ್ಥಿಕ ಸಹಕಾರ ನೀಡುವಂತೆ ನಾಗಮಜ್ಜಿಯ ಪರವಾಗಿ ಅವರ ಸೊಸೆ ಜಯಂತಿ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿದ ಧ.ಗ್ರಾ. ಯೋ. ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ಅವರು ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದರು. ಜು.17ರಂದು ಕೇಂದ್ರ ಕಚೇರಿಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದ್ದಲ್ಲದೇ, ಮನೆ ನಿರ್ಮಾಣದಲ್ಲಿ ತೊಡಗಿಸಿಕೊಂಡ ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಎರಡೇ ದಿನದಲ್ಲಿ ಮನೆಯ ಎಲೆಕ್ಟ್ರಿಕಲ್ ಹಾಗೂ ಪ್ಲಂಬಿಂಗ್ ಕೆಲಸಕ್ಕಾಗಿ 50 ಸಾವಿರ ರೂಪಾಯಿ ಆರ್ಥಿಕ ನೆರವನ್ನು ಮಂಜೂರುಗೊಳಿಸಿದ್ದು ಇಂದು ಚೆಕ್ ಹಸ್ತಾಂತರಿಸಿದ್ದಾರೆ.