ಬಂಟ್ವಾಳ: ಇಲ್ಲಿನ ಕಸ್ಬ ಗ್ರಾಮದ ಅಗ್ರಾರ್ ಬಳಿಯ ದರ್ಬೆ ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ಕ್ಷೇತ್ರ ಮತ್ತು ಗೋಶಾಲೆ ಟ್ರಸ್ಟ್ ವತಿಯಿಂದ ಭಕ್ತರ ಸಹಕಾರದೊಂದಿಗೆ ನೂತನವಾಗಿ ನಿರ್ಮಾಣಗೊಳ್ಳಲಿರುವ ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ಕ್ಷೇತ್ರಕ್ಕೆ ಗುರುವಾರ ಶಿಲಾನ್ಯಾಸ ನೆರವೇರಿತು.
ಕ್ಷೇತ್ರದ ಆರಾಧ್ಯ ಶಕ್ತಿ ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ಹಾಗೂ ಪರಿವಾರ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ವೇದಮೂರ್ತಿ ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಅಸ್ರಣ್ಣ ಅವರ ಪೌರೋಹಿತ್ಯದಲ್ಲಿ ಶಾಸ್ತ್ರೋಕ್ತವಾಗಿ ದೇವಸ್ಥಾನ ನಿರ್ಮಾಣಕ್ಕೆ ಶಿಲಾನ್ಯಾಸ ನಡೆಸಲಾಯಿತು. ಈ ಸಂದರ್ಭ ಶಿಲ್ಪಿ ಹರೀಶ್, ಕ್ಷೇತ್ರದ ಮುಖ್ಯಸ್ಥರಾದ ವಿಶ್ವನಾಥ ಕರ್ಕೇರಾ, ದೀಕ್ಷಿತ್, ದೇವಿ ದರ್ಶನಪಾತ್ರಿ ರಂಜಿತ ಮತ್ತಿತರ ಭಕ್ತರು ಉಪಸ್ಥಿತರಿದ್ದರು.
ಸುಮಾರು 850 ವರ್ಷಗಳ ಇತಿಹಾಸವಿರುವ ಹಾಗೂ ಅನಾದಿಕಾಲದಿಂದಲೂ ಕಲಶಮುಖೇನ ಆರಾಧಿಸಿಕೊಂಡು ಬಂದಿರುವ ಈ ಸಾನಿಧ್ಯವು ಪರಿವಾರ ಶಕ್ತಿಗಳೊಂದಿಗೆ ಜೀಣೋದ್ಧಾರಗೊಳ್ಳಬೇಕೆಂದು ತಾಯಿ ಆದಿಶಕ್ತಿ ಚಾಮುಂಡೇಶ್ವರಿಯ ಅಪ್ಪಣೆಯಾಗಿರುವುದಾಗಿ ಆರೂಢ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿರುವ ಹಿನ್ನಲೆಯಲ್ಲಿ ಸುಮಾರು
1 ಕೋಟಿ ರೂಪಾಯಿ ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಸಾನಿಧ್ಯದಲ್ಲಿ ಪ್ರತೀ ಮಂಗಳವಾರ, ಶುಕ್ರವಾರ ಹಾಗೂ ಸಂಕ್ರಮಣದಂದು ದರ್ಶನ ಸೇವೆಯ ಜೊತೆಗೆ ಭಕ್ತರ ಸಮಸ್ಯೆಗಳಿಗೆ ಪರಿಹಾರ ನೀಡಲಾಗುತ್ತಿದ್ದು ಅನ್ನದಾನ ಸೇವೆಯೂ ನಡೆಯುತ್ತಿದೆ. ಸಂಕ್ರಮಣ ಪೂಜೆ, ನವರಾತ್ರಿ ಪೂಜೆ, ವಾರ್ಷಿಕ ಪೂಜೆಗಳು ಭಜನಾ ಸಂಕೀರ್ತನೆಯೊಂದಿಗೆ ವಿಜ್ರಂಭಣೆಯಿಂದ ನಡೆದುಕೊಂಡು ಬರುತ್ತಿದೆ. ತಾಯಿ ಆದಿಶಕ್ತಿ ಚಾಮುಂಡೇಶ್ವರಿಯು ಕರೆದು ಮಾತನಾಡುವ ಶಕ್ತಿ ಎಂದು ಇಲ್ಲಿ ಪ್ರಸಿದ್ದಿಯಾಗಿದ್ದು ಇಲ್ಲಿನ ಮಣ್ಣು ಮದ್ದಾಗಿ ಫಲಿಸುವ ಸ್ಥಳ ಎಂಬ ಪ್ರತೀತಿಯನ್ನು ಹೊಂದಿದೆ. ವಾಸ್ತುತಜ್ಞ ಮಹೇಶ್ ಮುನಿಯಂಗಳ ಅವರ ನಿರ್ದೇಶನದಂತೆ ಕ್ಷೇತ್ರ ಪುನರ್ ನಿರ್ಮಾಣಕ್ಕೆ ಮುಂದಾಗಿದ್ದು ಪರಿವಾರ ಶಕ್ತಿಗಳಾಗಿ ಕ್ಷೇತ್ರಪಾಲ, ಗುಳಿಗ, ಕಲ್ಲುರ್ಟಿ ಹಾಗೂ ನಾಗದೇವರ ಗುಡಿ ನಿರ್ಮಿಸಲು ಅಪೇಕ್ಷಿಸಲಾಗಿದೆ. ವಿಶೇಷವಾಗಿ ಪ್ರಕೃತಿ ರಮಣೀಯ ಸ್ಥಳದಲ್ಲಿ ಪಶ್ಚಿಮಾಭಿಮುಖವಾಗಿ ದೇವಸ್ಥಾನ ನಿರ್ಮಾಣಗೊಳ್ಳಲಿದೆ.