ಬಂಟ್ವಾಳ: ಇಲ್ಲಿನ ಬಂಟ್ವಾಳ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ ಬೆಂಜನಪದವು ಶಾಖೆಯಲ್ಲಿ ಸದಸ್ಯರು ಹಾಗೂ ಗ್ರಾಹಕರ ಅನುಕೂಲದ ದೃಷ್ಟಿಯಿಂದ ಸೇಫ್ಲಾಕರ್ ಸೌಲಭ್ಯವನ್ನು ಅಳವಡಿಸಲಾಗಿದ್ದು ಬುಧವಾರ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಉದ್ಘಾಟಿಸಿದರು.
ಅವರು ಮಾತನಾಡಿ ತಾಲೂಕಿನಾದ್ಯಂತ ಈಗಾಗಲೇ 9 ಶಾಖೆಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘವು ಸದಸ್ಯರ ಬೇಡಿಕೆಗೆ ಅನುಗುಣವಾಗಿ ಈ ಸೌಲಭ್ಯವನ್ನು ಹಂತ ಹಂತವಾಗಿ ವಿವಿಧ ಶಾಖೆಗಳಲ್ಲಿ ಅಳವಡಿಸಲಾಗುವುದು ಎಂದು ತಿಳಿಸಿದರು. 4278ಜನ ಸದಸ್ಯರು, 10 ಸಾವಿರಕ್ಕಿಂತಲೂ ಹೆಚ್ಚು ಗ್ರಾಹಕರನ್ನು ಹೊಂದಿರುವ ಈ ಸಂಸ್ಥೆಯು ಸುಮಾರು 42 ಕೋಟಿ ರೂಪಾಯಿ ದುಡಿಯುವ ಬಂಡವಾಳವನ್ನು ಹೊಂದಿದ್ದು ಸದಸ್ಯರ ಠೇವಣಾತಿಗಳಿಗೆ ಗರಿಷ್ಠ ಶೇ. 9.50 ರಷ್ಟು ವಾರ್ಷಿಕ ಬಡ್ಡಿ ನೀಡುತ್ತಿದ್ದು ಆರ್ಥಿಕ ಅವಶ್ಯಕತೆಯುಳ್ಳ ಸದಸ್ಯರಿಗೆ ವ್ಯಾಪಾರಾಭಿವೃದ್ದಿ ಸಾಲ, ಆಸ್ತಿ ಅಡಮಾನ ಸಾಲ, ಕಟ್ಟಡ ನಿರ್ಮಾಣ ಸಾಲ ಬಂಗಾರದ ಅಡವಿನ ಸಾಲ ಹಾಗೂ ಇನ್ನಿತರ ಸಾಲ ಸೌಲಭ್ಯಗಳನ್ನು ಒದಗಿಸುತ್ತಿದೆ. 2020-21ನೇ ಸಾಲಿನಲ್ಲಿ ನಡೆಸಿರುವ ಸುಮಾರು 182 ಕೋಟಿ ವ್ಯವಹಾರದಿಂದ ಸಂಸ್ಥೆಯು ರು. 60.24 ಲಕ್ಷದಷ್ಟು ನಿವ್ವಳ ಲಾಭವನ್ನು ಗಳಿಸಿದ್ದು ಈ ಸಮಯದಲ್ಲಿ ಕೊವಿಡ್ ಮಹಾಮಾರಿ ವಕ್ಕರಿಸಿ ವ್ಯವಹಾರಕ್ಕೆ ತುಂಬಾ ಹೊಡೆತ ನೀಡಿದೆ. ಈ ಅವಧಿಯಲ್ಲಿ ಸದಸ್ಯರಿಗೆ ಒಂದು ತಿಂಗಳು ಬಡ್ಡಿ ರಹಿತ ಬಂಗಾರದ ಅಡವಿನ ಸಾಲ ಮತ್ತು ಸಂಸ್ಥೆ ರಾಯಿಯಲ್ಲಿ ಪಶುಸಂಗೋಪನ ವೃತ್ತಿ ನಿರತರಿಗೆ ಕೇಂದ್ರ ಸರ್ಕಾರದ ಸೂಚನೆಯಂತೆ ಶೇ. 7.5 ರಲ್ಲಿ ಸಾಲ ಸೌಲಭ್ಯ ನೀಡಲಾಗಿದ್ದು ಈ ವರ್ಷ ತೃಪ್ತಿದಾಯಕ ಲಾಭವನ್ನು ಹೊಂದಲಾಗಿದೆ. ಈ ಅವಧಿಗೆ ಸದಸ್ಯರಿಗೆ ಶೇ. 12 ರಷ್ಟು ಪಾಲು ಬಂಡವಾಳದ ಮೇಲೆ ಡಿವಿಡೆಂಡ್ ನೀಡುವ ಇರಾದೆಯನ್ನು ಹೊಂದಿದೆ ಎಂದು ತಿಳಿಸಿದರು.
ಸಂಸ್ಥೆಯ ಮುಖಾಂತರ ವಿದ್ಯುಚ್ಛಕ್ತಿ, ಟೆಲಿಪೋನ್ ಬಿಲ್ಲು ಪಾವತಿ ವ್ಯವಸ್ಥೆ, ಸರ್ಕಾರದ ಸೌಲಭ್ಯಗಳನ್ನು ಒದಗಿಸಿಕೊಡುವ ಕಾರ್ಯಗಳು ನಡೆಯುತ್ತಿದ್ದು ಇನ್ನು ಮುಂದಕ್ಕೆ ಬಂಟ್ವಾಳ ತಾಲೂಕಿಗೆ ಅಗತ್ಯವಿರುವ ಸೆಕ್ಯೂರಿಟ್ ಸರ್ವಿಸ್ ಕಾರ್ಯವನ್ನು, ಗ್ರಾಹಕರ ಕೃಷಿ ಉತ್ಪನ್ನಗಳಾದ ಅಡಿಕೆ ಹಾಗೂ ಇನ್ನಿತರ ವಸ್ತುಗಳ ಖರೀದಿ ವ್ಯವಸ್ಥೆಯನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದು ವಿವರಿಸಿದರು.
ಮುಖ್ಯ ಅತಿಥಿಯಾಗಿದ್ದ ಕ್ರಿಸ್ಟಲ್ ಕಟ್ಟಡದ ಮಾಲಕ ಬ್ಯಾಪ್ಟಿಸ್ಟ್ ಕ್ರಾಸ್ತ ಅವರಿಗೆ ಸೇಫ್ ಲಾಕರ್ನ ಮೊದಲ ಕೀಲಿ ಕೈಯನ್ನು ಹಸ್ತಾಂತರ ಮಾಡಲಾಯಿತು. ಅವರು ಮಾತನಾಡಿ ಸಂಘದ ಆಡಳಿತ ಮಂಡಳಿಯು ಅತ್ಯಂತ ಶ್ರದ್ದೆಯಿಂದ ಕೆಲಸ ನಿರ್ವಹಿಸುತ್ತಿದ್ದು ಗ್ರಾಹಕರ ಅನುಕೂಲಕ್ಕಾಗಿ ಹೊಸ ಹೊಸ ಸೌಲಭ್ಯಗಳನ್ನು ಒದಗಿಸುತ್ತಿರುವುದು ಅಭಿನಂದನೀಯ ಎಂದರು.
ಈ ಸಂದರ್ಭ ಸಂಸ್ಥೆಯ ಉಪಾಧ್ಯಕ್ಷ ಮಂಜುನಾಥ ರೈ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಜಿತ್ ಕುಮಾರ್ ಜೈನ್, ನಿರ್ದೇಶಕರಾದ ಹೇಮಂತ್ ಕುಮಾರ್, ಪ್ರಮುಖರಾದ ದಿವಾಕರ ಆಚಾರ್ಯ ಸಾಲೆತ್ತೂರು, ಅಶೋಕ್ ಬಡಕಬೈಲು ಉಪಸ್ಥಿತರಿದ್ದರು. ಶಾಖಾಧಿಕಾರಿ ಸದಾಶಿವ ಪುತ್ರನ್ ಸ್ವಾಗತಿಸಿದರು, ಹಿರಿಯ ಸಿಬ್ಬಂದಿ ಅತಿಶಯ ಹೆಗ್ಡೆ ವಂದಿಸಿದರು.