ಬಂಟ್ವಾಳ : ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿ. ಬೊಳ್ಳಾಯಿ ಇದರ ನೂತನ ವಾಮದಪದವು ಶಾಖೆಯನ್ನು ವಾಮದಪದವಿನ ಅಶ್ವಿನಿ ಕಾಂಪ್ಲೆಕ್ಸ್ ನಲ್ಲಿ ಎ.26ರಂದು ಬೆಳಗ್ಗೆ ಗಂಟೆ 9.30ಕ್ಕೆ ಉದ್ಘಾಟಿಸಲಾಗುವುದು ಎಂದು ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಸಂಘವು ಮೂರ್ತೆದಾರರ ಶ್ರೇಯೋಭಿವೃದ್ದಿ ಉದ್ದೇಶದೊಂದಿಗೆ ಕಳೆದ ಮೂವತ್ತು ವರ್ಷಗಳ ಹಿಂದೆ 1991ರಲ್ಲಿ ಬಂಟ್ವಾಳ ತಾಲೂಕಿನ ಸುಭಾಷ್ನಗರದ ಬ್ರಹ್ಮಶ್ರೀ ನಾರಾಯಣ ಗುರುಮಂದಿರದಲ್ಲಿ ಪ್ರಾರಂಭಗೊಂಡಿತ್ತು. 2005 ನ. 18ರಂದು ಸಜೀಪಮೂಡ ಗ್ರಾಮದ ಬೊಳ್ಳಾಯಿಯಲ್ಲಿ ಸಂಘವು ಬ್ಯಾಂಕಿಂಗ್ ವ್ಯವಹಾರವನ್ನು ಆರಂಭಿಸಿ ಕಳೆದ 16 ವರ್ಷಗಳಿಂದ ಯಶಸ್ವಿ ಯಾಗಿ ಮುನ್ನಡೆಯುತ್ತಿದೆ. ಸಂಘವು ಹಾಲಿ ಆರ್ಥಿಕ ವರ್ಷದಲ್ಲಿ 25 ಕೋಟಿ ರೂ. ವ್ಯವಹಾರ ನಡೆಸಿದೆ. 3900 ಸದಸ್ಯರನ್ನು ಹೊಂದಿದೆ. ತಾಲೂಕಿನ 11 ಗ್ರಾಮಗಳಾದ ಸಜೀಪಮುನ್ನೂರು, ಸಜೀಪಮೂಡ, ಅಮ್ಟೂರು, ಮಂಚಿ, ಇರಾ, ಬೋಳಂತೂರು, ಸಜೀಪನಡು, ಸಜೀಪಪಡು, ಚೇಳೂರು, ಕುರ್ನಾಡು, ಪಜೀರು ಗ್ರಾಮಗಳ ವ್ಯಾಪ್ತಿಯನ್ನು ಹೊಂದಿತ್ತು. ಕಳೆದ ಸಾಲಿನಲ್ಲಿ ಬಂಟ್ವಾಳ ತಾಲೂಕಿನ 17 ಗ್ರಾಮಗಳಾದ ಕರ್ಪೆ, ಸಂಗಬೆಟ್ಟು, ಎಲಿಯನಡುಗೋಡು ಮತ್ತು ಕುಕ್ಕಿಪಾಡಿ, ರಾಯಿ, ಕೊಲ, ಅರಳ, ಪಂಜಿಕಲ್, ಮೂಡನಡುಗೋಡು, ಬುಡೋಳಿ, ಪಿಲಿಮೊಗರು, ಚೆನ್ನೈತ್ತೋಡಿ, ಅಜ್ಜಿಬೆಟ್ಟು, ಕುಡಂಬೆಟ್ಟು, ಇರ್ವತ್ತೂರು, ಪಿಲಾತಬೆಟ್ಟು, ಮೂಡುಪಡುಕೋಡಿ ಗ್ರಾಮಗಳಿಗೆ ವಿಸ್ತರಣೆಗೊಂಡಿದೆ. ಸಹಕಾರಿಯು ಸಜೀಪಮುನ್ನೂರಿನಲ್ಲಿ ಕೇಂದ್ರ ಕಚೇರಿಯನ್ನು, ಬೋಳಂತೂರು, ಚೇಳೂರು, ಪಜೀರು ಗ್ರಾಮಗಳಲ್ಲಿ ಶಾಖೆಯನ್ನು ಹೊಂದಿದೆ, ಪ್ರಸ್ತುತ ನೂತನ 4ನೇ ಶಾಖೆಯನ್ನು ವಾಮದಪದವು ಅಶ್ವಿನಿ ಕಾಂಪ್ಲೆಕ್ಸ್ನಲ್ಲಿ ತೆರೆಯಲು ಸಿದ್ದತೆ ನಡೆದಿದೆ ಎಂದು ಮಾಹಿತಿ ನೀಡಿದರು.
ಸಂಸ್ಥೆಯು ಸಂಪೂರ್ಣ ಗಣಕೀಕೃತ ವ್ಯವಸ್ಥೆ ಹೊಂದಿದ್ದು ಸದಸ್ಯರಿಗೆ ಮೂರ್ತೆದಾರಿಕೆ ಸಾಲ, ಆಭರಣ ಸಾಲ, ವಾಹನ ಸಾಲ, ವ್ಯಾಪಾರ ಸಾಲ, ಅಡವು ಸಾಲ, ಮಹಿಳೆಯರಿಗೆ ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ 25 ಸಾವಿರ ರೂ. ವಿಶೇಷ ಸಾಲ ಸೌಲಭ್ಯ ಯೋಜನೆಯನ್ನು ರೂಪಿಸಿದೆ. ಮುಂದಿನ ಹಂತದಲ್ಲಿ ಬಂಟ್ವಾಳ ತಾಲೂಕಿನ ಉಳಿದ ಎಲ್ಲಾ ಗ್ರಾಮಗಳ ವ್ಯಾಪ್ತಿಯಲ್ಲಿ ಶಾಖೆಯನ್ನು ತೆರೆಯಲು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ.
ಸಂಘವು ಗುರುಶ್ರೀ ಸ್ವಸಹಾಯ ಗುಂಪುಗಳ ಪ್ರಾಯೋಜಕತ್ವದಲ್ಲಿ ಒಟ್ಟು ಹತ್ತು ಸ್ವಸಹಾಯ ಗುಂಪುಗಳನ್ನು ಹೊಂದಿದೆ. ಸ್ವಸಹಾಯ ಸಂಘದ ಸದಸ್ಯರ ಆರ್ಥಿಕ ಅಭಿವೃದ್ದಿಗೆ ಸ್ವಸಹಾಯ ಸಾಲಗಳನ್ನು ನೀಡುತ್ತಿದೆ ಎಂದು ತಿಳಿಸಿದರು.
ವಾಮದಪದವು ಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಲ್ಯೊಟ್ಟು ಗುರುಕೃಪ ಸೇವಾಶ್ರಮದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಸಭಾಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಬಿ. ರಮಾನಾಥ ರೈ ನೂತನ ಶಾಖೆಯನ್ನು ಉದ್ಘಾಟಿಸುವರು.
ಕಿಯೋನಿಕ್ಸ್ ಅಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ್ ಸೇಫ್ ಲಾಕರನ್ನು, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ. ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ ಕಂಪ್ಯೂಟರ್ ವ್ಯವಸ್ಥೆಯನ್ನು ಉದ್ಘಾಟಿಸುವರು. ಜಿ.ಪಂ.ಸದಸ್ಯ ಎಂ. ತುಂಗಪ್ಪ ಬಂಗೇರ ಠೇವಣಿ ಪತ್ರ ಬಿಡುಗಡೆ ಮಾಡುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಹಕಾರ ಸಂಘಗಳ ಸಹಾಯಕ ನಿಬಂಧಕ ಜಿ. ಸುಧೀರ್ ಕುಮಾರ್, ಉಪ್ಪಿನಂಗಡಿ ಮೂರ್ತೆದಾರರ ಸೇ. ಸ. ಸಂಘದ ಅಧ್ಯಕ್ಷೆ ಉಷಾ ಅಂಚನ್, ತಾ.ಪಂ.ಸದಸ್ಯರಾದ ರತ್ನಾವತಿ ಜೆ. ಶೆಟ್ಟಿ, ರಮೇಶ್ ಪೂಜಾರಿ ಕುಡುಮೇರು, ಪದ್ಮಾವತಿ ಬಿ. ಪೂಜಾರಿ, ಚೆನ್ನೈತ್ತೋಡಿ ಗ್ರಾ.ಪಂ. ಅಧ್ಯಕ್ಷೆ ಭಾರತಿ ರಾಜೇಂದ್ರ ಪೂಜಾರಿ ಕೊರಂಟಬೆಟ್ಟು, ಇರ್ವತ್ತೂರು ಗ್ರಾ.ಪಂ.ಅಧ್ಯಕ್ಷ ಎಂ.ಪಿ. ಶೇಖರ್, ಪಂಜಿಕಲ್ಲು ಗ್ರಾ.ಪಂ.ಅಧ್ಯಕ್ಷ ಸಂಜೀವ ಪೂಜಾರಿ ಪಿಲಿಂಗಾಲು, ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಹರ್ಷಿಣಿ ಪುಷ್ಪಾನಂದ, ಅಶ್ವಿನಿ ಕಾಂಪ್ಲೆಕ್ಸ್ ಮಾಲಕ ಸಂದೀಪ್ ಶೆಟ್ಟಿ ಪೊಡುಂಬ, ಉದ್ಯಮಿಗಳಾದ ಹಂಝ ಎ. ಬಸ್ತಿಕೋಡಿ, ಲಾದ್ರೂ ಮಿನೇಜಸ್, ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ, ನಿರ್ದೇಶಕರಾದ ರಮೇಶ್ ಅನ್ನಪ್ಪಾಡಿ, ವಿಠಲ ಬೆಳ್ಚಾಡ ಚೇಳೂರು, ಅಶೋಕ್ ಪೂಜಾರಿ ಕೋಮಾಲಿ, ಗಿರೀಶ್ ಕುಮಾರ್ ಪೆರ್ವ, ಜಯಶಂಕರ್ ಕಾನ್ಸಾಲೆ, ಕೆ. ಸುಜಾತ ಎಮ್, ವಾಣಿ ವಸಂತ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಮತಾ ಜಿ., ಶಾಖಾ ವ್ಯವಸ್ಥಾಪಕಿ ನಿಶ್ಮಿತಾ ಕೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಉಪಾಧ್ಯಕ್ಷ ಸುಂದರ ಪೂಜಾರಿ, ನಿರ್ದೇಶಕರಾದ ರಮೇಶ್ ಅನ್ನಪ್ಪಾಡಿ, ವಿಠಲ ಬೆಳ್ಚಾಡ ಚೇಳೂರು, ಅಶೋಕ್ ಪೂಜಾರಿ ಕೋಮಾಲಿ, ಗಿರೀಶ್ ಕುಮಾರ್ ಪೆರ್ವ, ಜಯಶಂಕರ್ ಕಾನ್ಸಲೆ, ಕೆ.ಸುಜಾತ ಎಂ., ವಾಣಿ ವಸಂತ, ಸಹಾಕಯ ಕಾರ್ಯನಿರ್ವಾಹಣಾಧಿಕಾರಿ ಪಲ್ಲವಿ ಉಪಸ್ಥಿತರಿದ್ದರು.