ಬಂಟ್ವಾಳ: ತುಳು ನಾಟಕ ಕಲಾವಿದರ ಒಕ್ಕೂಟ ಕುಡ್ಲ ಇದರ ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ವಿಶ್ವ ರಂಗಭೂಮಿ ದಿನವನ್ನು ಮಂಗಳವಾರ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಆಚರಿಸಲಾಯಿತು.
ಬಂಟ್ವಾಳ ತುಳು ಕೂಟದ ಅಧ್ಯಕ್ಷ ಸುದರ್ಶನ ಜೈನ್ ಕಾರ್ಯಕ್ರಮ ಉದ್ಘಾಟಿಸಿದರು. ಅವರು ಮಾತನಾಡಿ ಪರದೆ ನಾಟಕಗಳ ಕಾಲದ ನಾಟಕಕಾರರ ಬುದ್ದಿವಂತಿಕೆ, ತಾಳ್ಮೆಯನ್ನು ಮೆಚ್ಚುವಂತದ್ದು. ಆ ಬಳಿಕ ನಾಟಕ ರಂಗ ಪರಿವರ್ತನೆ ಕಂಡು ಕೊಂಡಿದೆ, ಕಲಾವಿದರಿಗೆ ಚಲನಚಿತ್ರದಲ್ಲೂ ನಟಿಸುವ ಅವಕಾಶ ಸಿಕ್ಕಿದೆ ಎಂದರು. ಕರೋನಾದಿಂದಾಗಿ ನಾಟಕ ಕ್ಷೇತ್ರಕ್ಕೆ ತುಂಬಾ ತೊಂದರೆಯಾಗಿದೆ. ನಾಟಕ ಕಲಾವಿದರ ಸಮಸ್ಯೆಗಳಿಗೆ ಕಲಾವಿದರ ಒಕ್ಕೂಟದ ಮೂಲಕ ಪರಿಹಾರ ಕಂಡು ಕೊಳ್ಳಲು ಸಾಧ್ಯವಿದೆ ಎಂದರು.
ಹಿರಿಯ ರಂಗ ಕಲಾವಿದ ಶೀನಪ್ಪ ನಾಕ್ ವಿಟ್ಲ ಮುಖ್ಯ ಭಾಷಣ ಮಾಡಿ ರಂಗಭೂಮಿಯನ್ನು ಬದುಕಿನ ಒಂದು ಅಂಗವಾಗಿ ಸ್ವೀಕರಿಸಿಕೊಂಡು ಸಂಕಷ್ಟ ಕಾಲದಲ್ಲೂ ಮನೋಸ್ಥೈರ್ಯ ಕಳೆದು ಕೊಳ್ಳದೆ ಮುಂದುವರೆಸಬೇಕು, ಕಲಾವಿದರು ನಾಟಕವನ್ನೇ ಅವಲಂಬಿಸದೇ ಪರ್ಯಾಯ ವೃತ್ತಿಯತ್ತ ಗಮನ ಹರಿಸಬೇಕು, ಸಮಯ ಪ್ರಜ್ಞೆ, ಶಿಸ್ತು ಸಂಯಮವನ್ನು ಕಲಾವಿದರು ಬೆಳೆಸಿಕೊಳ್ಳಬೇಕು. ನಿರ್ದಿಷ್ಟ ಪ್ರೇಕ್ಷಕರನ್ನು ತಯಾರು ಮಾಡುವ ಅವಶ್ಯಕತೆಯೂ ಪ್ರಸ್ತುತ ಕಾಲಘಟ್ಟದಲ್ಲಿ ಇದ್ದು ಪ್ರೇಕ್ಷಕರಿಗೆ ರಂಜನೆಯ ಜೊತೆಗೆ ಚಿಂತನೆಯನ್ನು ನೀಡುವ ಬಗ್ಗೆ ಕಲಾವಿದರು ಯೋಚಿಸಬೇಕಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಮಾತನಾಡಿ ಕಲೆಯ ಸತ್ವ ಈ ಮಣ್ಣಿನಲ್ಲಿದೆ. ಹಳೆಯ ಚಿಂತನೆಗಳೊಂದಿಗೆ ಹೊಸತನವನ್ನು ನೀಡಿದರೆ ಮಾತ್ರ ರಂಗಭೂಮಿ ಉಳಿಯಲು ಸಾಧ್ಯವಿದೆ. ನಿವೃತ್ತ ಬದುಕಿನಲ್ಲಿರುವ ಅರ್ಹ ಕಲಾವಿದರಿಗೆ ಸರಕಾರದಿಂದ ಸಿಗುವ ಮಾಶಸನವನ್ನು ತುಳು ನಾಟಕ ಕಲಾವಿದರ ಒಕ್ಕೂಟದ ಮೂಲಕ ದೊರಕಿಸುವ ಪ್ರಯತ್ನ ಆಗಬೇಕು ಎಂದರು. ಹಿರಿಯ ರಂಗ ಕರ್ಮಿ ಮಂಜುವಿಟ್ಲ ಪ್ರಾಸ್ತಾವಿಕವಾಗಿ ಮಾತನಾಡಿ ಸಮಾಜಕ್ಕೆ ಉತ್ತಮ ಸಂದೇಶವನ್ನು ರಂಗಭೂಮಿಯ ಮೂಲಕ ನೀಡಲು ಸಾಧ್ಯ. ಎಷ್ಟೇ ಸಂಕಷ್ಟಸ್ಥಿತಿಯಲ್ಲಿದ್ದರೂ ಪ್ರೇಕ್ಷಕರನ್ನು ರಂಜಿಸುವುದು ಕಲಾವಿದ ಮಾತ್ರ. ಎಲ್ಲಾ ಕಲಾವಿದರನ್ನು ಗೌರವಿಸುವ ಕಾರ್ಯ ಆಗಲಿ ಎಂದು ಆಶಿಸಿದರು.
ಸಹ ಸಂಚಾಲಕ ಪದ್ಮನಾಭ ಆಚಾರ್ಯ ಪಚ್ಚಿನಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಚಾಲಕ ಸುಭಾಶ್ಚಂದ್ರ ಜೈನ್ ಸ್ವಾಗತಿಸಿ, ವಂದಿಸಿದರು, ಕಲಾವಿದ ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.