ಬಂಟ್ವಾಳ: ರಾರಾಸಂ ಫೌಂಡೇಶನ್ ಬಂಟ್ವಾಳ ಇದರ ದಶಸಂಭ್ರಮ ಕಾರ್ಯಕ್ರಮಕ್ಕೆ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ತಹಶೀಲ್ದಾರ್ ರಶ್ಮಿ. ಎಸ್. ಆರ್. ಚಾಲನೆ ನೀಡಿದರು.
ಒತ್ತಾಯದಿಂದ ಯಾವುದೇ ಪ್ರತಿಭೆಯೂ ಅನಾವರಣಗೊಳ್ಳಲು ಸಾಧ್ಯವಿಲ್ಲ. ಮಕ್ಕಳ ಮೇಲೆ ಒತ್ತಡ ಬೀರದೆ, ಅವರಿಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಪ್ರೋತ್ಸಾಹಿಸಬೇಕು ಎಂದರು. ಓದು ಅಥವಾ ಇತರ ಯಾವುದೇ ಚಟುವಟಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಯಶಸ್ಸು ಪಡೆಯಲು ಸಾಧ್ಯವಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಶಿಕ್ಷಕ ಬಿ.ರಾಮಚಂದ್ರ ರಾವ್ ಮಾತನಾಡಿ
ಮಕ್ಕಳ ಪ್ರತಿಭೆ ಸಹಜವಾಗಿ ಬೆಳೆಯಲು ಪೋಷಕರು ಅವಕಾಶ ಮಾಡಿಕೊಡಬೇಕು ಎಂದರು. ಉದ್ಯಮಿ ಡಾ. ಎಸ್.ಎಂ. ಗೋಪಾಲಕೃಷ್ಣ ಆಚಾರ್ಯ, ಸರಕಾರಿ ನೌಕರರ ಸಂಘದ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಉಮಾನಾಥ ರೈ ಮೇರಾವು ಉಪಸ್ಥಿತರಿದ್ದರು.
ಸಂಸ್ಥೆಯ ನಿರ್ದೇಶಕ ಕೇಶವ ಮಾಸ್ತರ್ ಸ್ವಾಗತಿಸಿದರು. ಅಧ್ಯಕ್ಷ ರಾಧಕೃಷ್ಣ ಬಂಟ್ವಾಳ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ದಾಮೋದರ ಏರ್ಯ ವಂದಿಸಿದರು. ಈಶ್ವರ್ ಕಾರ್ಯಕ್ರಮ ನಿರೂಪಿಸಿದರು.