ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಂಟ್ವಾಳ, ರೋಟರಿ ಕ್ಲಬ್ ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ ಜ| ಕೆ.ಎಸ್. ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಇವರ ಸಹಯೋಗದೊಂದಿಗೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜಾ ಅವರ ಮಾತಾಪಿತರಾದ ದಿ. ಸರಸ್ವತಿ ಕೆ. ಪೂಂಜಾ ಹಾಗೂ ಕೆ. ಕಾಂತಪ್ಪ ಪೂಂಜ ಫರಂಗಿಪೇಟೆ ಇವರ ಸ್ಮರಣಾರ್ಥ ಉಚಿತ ಹೃದಯ ತಪಾಸಣ ಶಿಬಿರ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ಗುರುವಾರ ನಡೆಯಿತು.
ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ಶಿಬಿರ ಉದ್ಘಾಟಿಸಿದರು. ಅವರು ಮಾತಾನಾಡಿ ಸಮಯಕ್ಕೆ ಸರಿಯಾಗಿ ಹೃದಯ ಸಹಿತ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು. ಮುನ್ನೆಚ್ಚರಿಕೆಯಿಂದ ಶೇ. 80 ರಷ್ಟು ಹೃದಯ ರೋಗ ತಡೆಗಟ್ಟಬಹುದು ಎಂದು ತಿಳಿಸಿದರು.
ಜ| ಕೆ.ಎಸ್. ಹೆಗ್ಡೆ ಆಸ್ಪತ್ರೆ ಹೃದಯ ತಜ್ಞ ಡಾ. ಸುಬ್ರಹ್ಮಣ್ಯಂ ಕೆ. ಮಾತನಾಡಿ ನಿಯಮಿತವಾದ ವ್ಯಾಯಮ, ಪ್ರಾಣಾಯಾಮದಿಂದ ಹೃದಯದ ಆರೋಗ್ಯದ ಜೊತೆಗೆ ದೇಹದ ಆರೋಗ್ಯ ಕಾಪಾಡ ಬಹುದಾಗಿದೆ. ಆಹಾರ ಪದ್ದತಿ, ಮಾನಸಿಕ ಒತ್ತಡ ಹೃದಯದ ಮೇಲೆ ಪರಿಣಾಮ ಬೀರುತ್ತದೆ. ರಕ್ತ ಪರೀಕ್ಷೆ, ನಿಯಮಿತವಾದ ಆಹಾರ ಸೇವೆನೆ, ಜೀವನ ಶೈಲಿಯ ಬದಲಾವಣೆಯಿಂದ ಹೃದಯ ರೋಗ ಬಾರದಂತೆ ತಡೆಗಟ್ಟಬಹುದಾಗಿದೆ ಎಂದರು.
ರೋಟರಿ ನಿಯೋಜಿತ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಮಾತನಾಡಿ ಸಂಪತ್ತು ಗಳಿಸುವುದು ಮುಖ್ಯ ಅಲ್ಲ, ಇನ್ನೊಬ್ಬರನ್ನು ಸಂಪದ್ಭರಿತ ಗೊಳಿಸುವುದು ಮುಖ್ಯ. ಆರೋಗ್ಯ ನಮ್ಮ ಕೈಯಲ್ಲಿದೆ. ಅದನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಅವರು ಮಾತನಾಡಿ ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ಸಂಪತ್ತೇ ಜೀವನ ಎನ್ನುವ ಭ್ರಮೆಯಲ್ಲಿ ನಾವು ಬದುಕುತ್ತಿದ್ದೇವೆ. ವೇಗದ ಬದುಕಿಗೆ ಒಡ್ಡಿಕೊಳ್ಳುತ್ತಿರುವುದರಿಂದ ಹೃದಯಕ್ಕೆ ಅತೀವ ಒತ್ತಡ ನೀಡುತ್ತಿದ್ದೇವೆ. ಇದರಿಂದಾಗಿ ಹೃದಯ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹತ್ತು ರೋಗಿಯ ಸೇವೆ ಮಾಡಿದರೆ ಅದು ಹತ್ತು ದೇವಸ್ಥಾನಕ್ಕೆ ಹೋದಂತೆ ಎಂದು ತಿಳಿಸಿದರು. ಅರ್ಕುಳ ಬೀಡು ವಜ್ರನಾಭ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷ ಕೆ. ನಾರಾಯಣ ಹೆಗ್ಡೆ, ಕಾರ್ಯದರ್ಶಿ ವಾಣಿ ಕಾರಂತ್, ತುಂಬೆ ಗ್ರಾ.ಪಂ. ಅಧ್ಯಕ್ಷ ಪ್ರವೀಣ್ ಬಿ. ತುಂಬೆ, ಪುದು ಗ್ರಾ.ಪಂ. ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಎಸ್ಕೆಡಿಆರ್ಡಿಪಿ ಮೇಲ್ವಿಚಾರಕಿ ಮಮತಾ, ದಂತ ತಜ್ಞ ಡಾ. ರಂಜಿತ್ ಶೆಟ್ಟಿ, ಸಂಸ್ಥೆಯ ಪೋಷಕರಾದ ಅರ್ಕುಳ ಝಪ್ರುಲ್ಲಾ ಒಡೆಯರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾರಾನಾಥ ಕೊಟ್ಟಾರಿ ಸ್ವಾಗತಿಸಿದರು. ಸೇವಾಂಜಲಿ ಪ್ರತಿಷ್ಠಾನ ದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ವಂದಿಸಿದರು. ಕೊಡ್ಮಾಣ್ ದೇವದಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.