ಬಂಟ್ವಾಳ : ಕೋವಿಡ್ ಬಾಧೆಯಿಂದ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಆವರಿಸಿದ್ದ ಕಾರ್ಮೋಡ ನಿಧಾನವಾಗಿ ಕರಗುತ್ತಿದ್ದು ವಿದ್ಯಾರ್ಥಿಗಳನ್ನು ಮೊಬೈಲ್ ಆಕರ್ಷಣೆ ಮತ್ತು ರಜಾ ಮನೋಭಾವದಿಂದ ವಿಮುಖಗೊಳಿಸಿ ಅಧ್ಯಯನದ ಕಡೆಗೆ ಗಮನಹರಿಸುವಂತೆ ಮಾಡುವ ಹೊಣೆ ಶಿಕ್ಷಕರು ಮತ್ತು ಪೋಷಕರು ಮೇಲಿದೆ ಎಂದು ಸ.ಪ.ಪೂ.ಕಾಲೇಜು ಬಿ.ಮೂಡ ಇದರ ಪ್ರಾಂಶುಪಾಲ ಯೂಸುಫ್ ವಿಟ್ಲ ಇಲ್ಲಿ ಹೇಳಿದರು.
ಅವರು ಜನವರಿ ೨೦ ಮತ್ತು ೨೧ ರಂದು ಕಾಲೇಜಿನಲ್ಲಿ ನಡೆದ ದ್ವಿತೀಯ ಪಿಯುಸಿ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳ ಷೋಷಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಶೈಕ್ಷಣಿಕ ವರ್ಷದಲ್ಲಿ ಪಿಯುಸಿ ಮಕ್ಕಳು ನಾಲ್ಕೈದು ತಿಂಗಳ ಅಧ್ಯಯನ ಮಾಡಿ ಪರೀಕ್ಷೆಗೆ ಸಿದ್ಧರಾಗಬೇಕಿದ್ದು ಪೋಷಕರು ತಮ್ಮ ಮಕ್ಕಳ ಮೇಲೆ ಹೆಚ್ಚಿನ ಗಮನ ನೀಡಬೇಕು ಎಂದು ಅವರು ಹೇಳಿದರು.
ಗಣಿತ ಶಾಸ್ತ್ರ ಉಪನ್ಯಾಸಕಿ ಲಕ್ಷೀ ಆಚಾರ್ಯ, ಅರ್ಥಶಾಸ್ತ್ರ ಉಪನ್ಯಾಸಕ ಬಾಲಕೃಷ್ಣ ನಾಯ್ಕ್ ಪೋಷಕರಿಗೆ ಸೂಕ್ತ ಸಲಹೆ ಸೂಚನೆ ನೀಡಿದರು. ಉಪನ್ಯಾಸಕರಾದ ವಿಘ್ನೇಶ್, ದಿವ್ಯಾ, ಪ್ರತೀಕ್ಷಾ, ಚೈತ್ರಾ ಉಪಸ್ಥಿತರಿದ್ದರು.
ರಾಜ್ಯಶಾಸ್ತ್ರ ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು. ಇಂಗ್ಲಿಷ್ ಭಾಷಾ ಉಪನ್ಯಾಸಕ ದಾಮೋದರ ಇ. ವಂದಿಸಿದರು.