ಬಂಟ್ವಾಳ: ಕಳೆದ ಪುರಸಭೆಯ ಸಾಮಾನ್ಯ ಸಭೆಯಂದೇ ಕುಡಿತದ ಮತ್ತಿನಲ್ಲಿ ವಿಷದ ಬಾಟಲಿಯನ್ನು ಹಿಡಿದುಕೊಂಡು ಆತ್ಮಹತ್ಯೆ ಮಾಡುವುದಾಗಿ ನಾಟಕವಾಡಿ ಮುಖ್ಯಾಧಿಕಾರಿ ಹಾಗೂ ಎಂಜಿನಿಯರ್ ಸಹಾಯಕರ ವಿರುದ್ದ ಸುಳ್ಳು ಆರೋಪ ಹೊರಿಸಿದ್ದ ಬಂಟ್ವಾಳ ಪುರಸಭೆಯ ಆರೋಗ್ಯ ನೀರಿಕ್ಷಕ ಬುಧವಾರ ನಡೆದ ಸಭೆಗೂ ಗೈರು ಹಾಜರಾಗಿದ್ದು, ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು.
ಬಂಟ್ವಾಳ ಪುರಸಭೆಯಲ್ಲಿ ಕಸದ ಸಮಸ್ಯೆಯ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿದ್ದರೂ ಆರೋಗ್ಯ ನಿರೀಕ್ಷಕರು ಹಲವು ದಿನಗಳಿಂದ ಕಚೇರಿಗೆ ಬಾರದೆ ರಜೆಯಲ್ಲಿ ತೆರಳಿದ್ದಾರೆ, ಇದರಿಂದಾಗಿ ಆರೋಗ್ಯ ನಿರೀಕ್ಷರು ಮಾಡಬೇಕಾದ ಕೆಲಸವನ್ನು ಮುಖ್ಯಾಧಿಕಾರಿ ಹಾಗೂ ಇತರ ಅಧಿಕಾರಿಗಳು ಮಾಡಬೇಕಾದ ಸನ್ನಿವೇಶ ನಿರ್ಮಾಣಗೊಂಡಿದ್ದು ಆರೋಗ್ಯ ನಿರೀಕ್ಷಕರ ವಿರುದ್ದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಪುರಸಭೆಯ ಆರೋಗ್ಯ ನಿರೀಕ್ಷರು ಎಲ್ಲಿಗೆ ಹೋಗಿದ್ದಾರೆ? ಎಂದು ವಿಷಯ ಪ್ರಸ್ತಾಪಿಸಿದ ವಿಪಕ್ಷ ಸದಸ್ಯ ಗೋವಿಂದ ಪ್ರಭು ಅಧಿಕಾರಿಯ ಬೇಜವಬ್ದಾರಿಯ ವರ್ತನೆಯಿಂದ ಬಂಟ್ವಾಳ ಪುರಸಭೆಯ ಘನತೆಗೆ ಧಕ್ಕೆ ಉಂಟಾಗಿದೆ, ಪುರಸಭೆಯ ಗೌರವವನ್ನು ಹರಾಜು ಮಾಡಿದ್ದಾರೆ ಎಂದು ಆರೋಪಿಸಿದರು. ಆರೋಗ್ಯ ನೀರಿಕ್ಷಕ ಅಧ್ಯಕ್ಷರಿಗೆ ನೀಡಿದ್ದ ಡೆತ್ ನೋಟ್ ಮಾಧ್ಯಮಗಳಿಗೆ ಸೋರಿಕೆಯಾಗಿದ್ದು ಹೇಗೆ? ಈ ಕೆಲಸವನ್ನು ಮಾಡಿದ್ದು ಯಾರು? ಎಂದು ಪ್ರಶ್ನಿಸಿದರು. ಈ ಸಂದರ್ಭ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವೆ ಮಾತಿನ ಚಕಮಕಿಯೂ ನಡೆದು ಆರೋಪ ಪ್ರತ್ಯಾರೋಪಗಳು ಕೇಳಿ ಬಂತು. ಸದಸ್ಯ ಮೊನೀಶ್ ಅಲಿ ಮಾತನಾಡಿ ನಾನು ಕಳೆದ 8 ವರ್ಷಗಳಿಂದ ಬಂಟ್ವಾಳ ಪುರಸಭೆಯ ಸದಸ್ಯನಾಗಿದ್ದೇನೆ. ಇಲ್ಲಿಗೆ ಎಷ್ಟು ಮಂದಿ ಆರೋಗ್ಯ ನಿರೀಕ್ಷರು ಬಂದು ಹೋಗುತ್ತಾರೆ ಗೊತ್ತಾಗುತ್ತಿಲ್ಲ, ಈಗಿನ ಆರೋಗ್ಯ ನಿರೀಕ್ಷಕರನ್ನು ಒಮ್ಮೆಯೂ ನಾನು ಪುರಸಭೆ ಕಚೇರಿಯಲ್ಲಿ ನೋಡಿಲ್ಲ, ಆಸ್ಪತ್ರೆಯ ಬೆಡ್ನಲ್ಲಿರುವ ಪೊಟೊದಲ್ಲಿ ಅವರ ಮುಖ ನೋಡಿರುವುದಾಗಿ ತಿಳಿಸಿದರು. ಸುಳ್ಳು ಆರೋಪ ಹೊರಿಸಿ ಡೆತ್ನೋಟ್ ಬರೆದಿರುವ ಬಗ್ಗೆ ಮುಖ್ಯಾಧಿಕಾರಿಯವರು ಜಿಲ್ಲಾಧಿಕಾರಿ ಹಾಗೂ ನಗರ ಕೋಶದ ಯೋಜನಾ ನಿರ್ದೇಶಕರಿಗೆ ತನಿಖೆ ನಡೆಸುವಂತೆ ದೂರಿಕೊಂಡ ಹಿನ್ನಲೆಯಲ್ಲಿ ಮೂರು ಮಂದಿ ಅಧಿಕಾರಿಗಳ ತಂಡ ವಿಚಾರಣೆ ನಡೆಸಿದ ವೇಳೆ ನನ್ನಿಂದ ತಪ್ಪಾಗಿದೆ, ನನ್ನನ್ನು ಕ್ಷಮಿಸಿ ಎಂದು ಖುದ್ದು ಒಪ್ಪಿಕೊಂಡಿರುವುದಾಗಿ ಅಧ್ಯಕ್ಷ ಮಹಮ್ಮದ್ ಶರೀಫ್ ಸಭೆಯ ಗಮನಕ್ಕೆ ತಂದರು. ನಿಮ್ಮ ಮನೆಯ ಸಮಸ್ಯೆಗಳನ್ನು ಕಚೇರಿಗೆ ತರಬೇಡಿ, ನಿಮಗೆ ಇಲ್ಲಿ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಪದೇ ಪದೇ ರಜೆ ಮಾಡುವ ಬದಲು ಇಲ್ಲಿಂದ ಬೇರೆಡೆಗೆ ಹೋಗಿ ಎಂದು ಸೂಚಿಸಿರುವುದಲ್ಲದೆ ಅವರನ್ನು ಬೇರೆಡೆಗೆ ವರ್ಗಾಯಿಸುವಂತೆ ಯೋಜನಾ ನಿರ್ದೇಶಕರಿಗೆ ಹೇಳಿರುವುದಾಗಿ ಅಧ್ಯಕ್ಷ ಶರೀಫ್ ಸಭೆಗೆ ತಿಳಿಸಿದರು. ಪುರಸಭೆಯ ಸಮಸ್ಯೆಗಳೇ ಸಾಕಷ್ಟು ಇರುವಾಗ ಅವರ ಬಗ್ಗೆ ನಾವ್ಯಾಗೆ ಮಾತಾಡಿ ಸಮಯ ವ್ಯರ್ಥ ಮಾಡುವುದೆಂದು ಸದಸ್ಯರ ಸಲಹೆಯ ಮೇರೆಗೆ ಚರ್ಚೆಗೆ ತೆರೆ ಬಿತ್ತು.
ಪ.ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ವಿವಿಧ ಯೋಜನೆಯಡಿಯಡಿ ಸಬ್ಸಿಡಿ ನೀಡುವುದಾಗಿ ಅಧಿಕಾರಿಗಳು ತಿಳಿಸುತ್ತಾರೆ. ಆದರೆ ಬಂಟ್ವಾಳದ ಯಾವುದೇ ರಾಷ್ಟ್ರೀಕೃತ ಬ್ಯಾಂಕುಗಳು ಫಲಾನುಭವಿಗಳಿಗೆ ಸ್ಪಂದಿಸುವುದಿಲ್ಲ. ಮನೆಯಿಂದ ಬ್ಯಾಂಕಿಗೆ, ಬ್ಯಾಂಕಿಂದ ಮನೆಗೆ ಅಲೆದಾಡ ಬೇಕು, ಸ್ಥಳೀಯ ಸಂಸ್ಥೆಗಳು ಸಹಾಯ ಮಾಡಿದರೂ ಬ್ಯಾಂಕ್ ಮ್ಯಾನೇಜರ್ಗಳು ಅವರನ್ನು ಸತಾಯಿಸುತ್ತಾರೆ ಎಂದು ಆಡಳಿತ ಪಕ್ಷದ ಸದಸ್ಯ ಜನಾರ್ದನ ಚೆಂಡ್ತಿಮಾರ್ ಆರೋಪಿದರು. ಸ್ಥಳೀಯ ಸಂಸ್ಥೆಗಳು ಆಯ್ಕೆ ಮಾಡುವ ಫಲಾನುಭವಿಗಳಿಗೆ ಬ್ಯಾಂಕ್ ಅಧಿಕಾರಿಗಳು ಮೊದಲ ಆದ್ಯತೆ ನೀಡಬೇಕು, ಈ ಬಗ್ಗೆ ಪುರಸಭೆಯ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸದಸ್ಯ ಲುಕ್ಮಾನ್ ಧ್ವನಿಗೂಡಿಸಿದರು. ಇತ್ತೀಚೆಗೆ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡುವ ಸಂದರ್ಭದಲ್ಲೂ ಅವರ ಸಿಬಿಲ್ ಪರಿಶೀಲಿಸಲಾಗಿದೆ ಎಂದು ಮೊನೀಶ್ ಅಲಿ ತಿಳಿಸಿದರು.
ಅಧ್ಯಕ್ಷ ಮಹಮ್ಮದ್ ಶರೀಫ್ ಸಭಾಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಜೆಸಿಂತಾ ಡಿಸೋಜಾ, ಮುಖ್ಯಾಧಿಕಾರಿ ಲೀನಾಬ್ರಿಟ್ಟೋ ಉಪಸ್ಥಿತರಿದ್ದರು. ಸದಸ್ಯರಾದ ರಾಮಕೃಷ್ಣ ಆಳ್ವ, ವಾಸು ಪೂಜಾರಿ, ಗಂಗಾಧರ, ಹಸೈನಾರ್, ಲುಕ್ಮಾನ್, ಜನಾರ್ದನ ಚೆಂಡ್ತಿಮಾರ್, ಗಾಯಾತ್ರಿ ಪ್ರಕಾಶ್, ವಿದ್ಯಾವತಿ, ಹರಿಪ್ರಸಾದ್, ಸಿದ್ದೀಕ್ ಗುಡ್ಡೆಯಂಗಡಿ ಚರ್ಚೆಯಲ್ಲಿ ಪಾಲ್ಗೊಂಡರು.