ಬಂಟ್ವಾಳ : ತಾಲೂಕು ಪ್ರಿಂಟರ್ಸ್ ಎಸೋಸಿಯೇಶನ್ ಇದರ ವತಿಯಿಂದ ಎಸ್ಎಸ್ಎಲ್ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 85ಕ್ಕಿಂತ ಅಧಿಕ ಅಂಕ ಪಡೆದ ಎಸೋಸಿಯೇಶನಿನ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾನಿಧಿ ವಿತರಣೆ ಮತ್ತು ಎಸೋಸಿಯೇಶನಿನ ವಾರ್ಷಿಕ ಮಹಾಸಭೆಯು ಆದಿತ್ಯವಾರ ಬೆಳಿಗ್ಗೆ ಬಿ.ಸಿ.ರೋಡಿನ ರಾಜರಾಜೇಶ್ವರಿ ಕಾಂಪ್ಲೆಕ್ಸ್ನಲ್ಲಿರುವ ಯೂನಿಕ್ ಎಜುಕೇರ್ನಲ್ಲಿ ನಡೆಯಿತು.
ಪಿಯುಸಿಯಲ್ಲಿ ಶೇ. 98 ಅಂಕ ಪಡೆದು ಪ್ರಥಮ ಸ್ಥಾನ ಪಡೆದ ಮಯ್ಯರಬೈಲಿನ ದುರ್ಗಾ ಪ್ರಿಂಟರ್ಸ್ನ ರಮೇಶ್ ಅವರ ಪುತ್ರಿ ಚೈತ್ರಾಂಜಲಿ, ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಪಾಣೆಮಂಗಳೂರಿನ ತರುಣ್ ಪ್ರಿಂಟರ್ಸ್ನ ಕಾರ್ಮಿಕರಾದ ಅನ್ವರ್ ಅಬೂಬಕ್ಕರ್ ಮಗಳು ಹಫೀಫಾ ಸುನೈನಾ ಮತ್ತು ಎಸ್ಎಸ್ಎಲ್ಸಿಯಲ್ಲಿ ಶೇಕಡಾ 93 ಅಂಕ ಪಡೆದ ದರಿಬಾಗಿಲಿನ ಮಾಧವ ಅವರ ಪುತ್ರಿ ಹರ್ಷಿತಾ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾನಿಧಿಯನ್ನು ಪಡೆದರು.
ಎಸೋಸಿಯೇಶನ್ ಅಧ್ಯಕ್ಷ ಈಶ್ವರ ಕುಮಾರ್ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಯಾವುದೇ ಸಂಘಟನೆಯು ಉತ್ತಮವಾಗಿ ಬೆಳೆಯಬೇಕಾದರೆ ಅಲ್ಲಿ ಪ್ರತಿಯೊಬ್ಬರ ಪರಿಶ್ರಮದ ಅಗತ್ಯ ಇದೆ. ಆಗಾಗಿ ಒಂದೇ ಮನಸ್ಸಿನಿಂದ ದುಡಿದಾಗ ಮಾತ್ರ ಉತ್ತಮವಾಗಿ ಬೆಳೆಯಲು ಸಾಧ್ಯ ಎಂದು ತಿಳಿಸಿದರು. ವೇದಿಕೆಯಲ್ಲಿ ಎಸೋಸಿಯೇಶನಿನ ಸ್ಥಾಪಕಾಧ್ಯಕ್ಷ ಲಿಯೋ ಬಾಸಿಲ್ ಫೆರ್ನಾಂಡೀಸ್, ಉಪಾಧ್ಯಕ್ಷ ವಿದ್ಯಾಧರ್ ಜೈನ್ ಉಪಸ್ಥಿತರಿದ್ದರು.
ಮಹಾಸಭೆಯಲ್ಲಿ 2019-20 ಸಾಲಿನ ವರದಿ ಮತ್ತು ಲೆಕ್ಕಪತ್ರ ಕಾರ್ಯದರ್ಶಿ ಯಾದವ ಅಗ್ರಬೈಲು ಮಂಡಿಸಿದರು. ಪ್ರಶಾಂತ್ ಕಾರ್ಯಕ್ರಮ ನಿರೂಪಿದರು. ಕಾರ್ಯಕ್ರಮದಲ್ಲಿ ಪಿ. ಮಂಜಪ್ಪ ಅರಳ, ಹರೀಶ ವೀರಕಂಭ, ಪೂರ್ಣಿಮಾ ಮಂಚಿ ಸಹಕರಿಸಿದರು. 2021-23ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.