ಬಂಟ್ವಾಳ : ಚುನಾವಣೆ ಅಂದ ಮೇಲೆ ಸೋಲು-ಗೆಲುವು ಸಹಜ, ಗ್ರಾಮಪಂಚಾಯತಿ ಚುನಾವಣೆಯ ಫಲಿತಾಂಶ ಏನೇ ಆದರೂ ಚಿಂತಿಸದೆ, ನಿರಂತರ ಜನಸಂಪರ್ಕದೊಂದಿಗೆ ಕಾಂಗ್ರೇಸ್ ಪಕ್ಷದ ತತ್ವಗಳನ್ನು ಎತ್ತಿಹಿಡಿಯುವದರ ಜೊತೆಗೆ ಪಕ್ಷದ ಏಳಿಗೆಗೆ ಶ್ರಮಿಸುವುದೇ ಪಕ್ಷದ ಋಣತೀರಿಸುವ ಮಾರ್ಗ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಶನಿವಾರ ನಡೆದ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಿದ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಅಭಿನಂದನಾ ಭಾಷಣ ಮಾಡಿದರು.
ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಗ್ರಾಮೀಣ ಪ್ರದೇಶದಲ್ಲಿ ಬೆದರಿಕೆಯ ವಾತಾವರಣವನ್ನು ಸೃಷ್ಟಿಸಿದ ಬಿಜೆಪಿಯ ಬೆದರಿಕೆಗೆ ಜಗ್ಗದೆ ಚುನಾವಣೆಯಲ್ಲಿ ಸ್ಪರ್ಧಿಸಿದ ಎಲ್ಲಾ ಕಾರ್ಯಕರ್ತರನ್ನು ಅಭಿನಂದಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಎದುರಾಗಲಿರುವ ತಾಪಂ, ಜಿಪಂ ಚುನಾವಣೆಗೆ ತಯಾರಾಗುವಂತೆ ಅವರು ಕರೆ ನೀಡಿದರು.
ಮತದಾರನ ಕೈಯಲ್ಲಿ ಫಲಿತಾಂಶ ಅಡಗಿದ್ದು, ರಾಜಕೀಯದಲ್ಲಿ ಅಧಿಕಾರದ ಏರಿಳಿತಗಳು ಸಹಜ, ಇದನ್ನು ಕಾಂಗ್ರೇಸ್ ಪಕ್ಷ ಎದುರಿಸುತ್ತಾ ಬಂದಿದೆ ಎಂದ ಅವರು, ಕಾಂಗ್ರೇಸ್ ಪಕ್ಷ ಹಾಗೂ ಕ ಕಾರ್ಯಕರ್ತರ ಋಣವನ್ನು ತಾನು ಎಂದೂ ಮರೆಯಲಾರೆ ಎಂದರು.
ತೈಲಬೆಲೆ ಹಾಗೂ ಗ್ಯಾಸ್ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಬಡವರ ಕಿಸೆಯಿಂದ ದೋಚಿ ಬಂಡವಾಳ ಶಾಹಿಗಳ ಹೊಟ್ಟೆ ತುಂಬಿಸುವ ಕೆಲಸ ಬಿಜೆಪಿ ಸರ್ಕಾರದಿಂದ ಆಗುತ್ತಿದೆ ಎಂದು ಟೀಕಿಸಿದ ರೈ, ಕೊರೋನಾ ಸಂದರ್ಭದಲ್ಲಿಯೂ ಭಷ್ಟಾಚಾರ ನಡೆದಿದ್ದು, ಅವೈಜ್ಞಾನಿಕವಾದ ವಿದ್ಯುತ್ ಬಿಲ್ನಿಂದ ಬಡವರು ಸಂಕಟ ಪಡುವಂತಾಗಿದೆ ಎಂದವರು ವಾಗ್ದಾಳಿಗೈದರು.
ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿ, ಅಧಿಕಾರ ಕೊಟ್ಟು ನಾವೇ ಬೆಳೆಸಿದ ನಾಯಕರು ಇಂದು ಪಕ್ಷ ಬಿಟ್ಟಿದ್ದಾರೆ, ಅದಕ್ಕೆ ಯಾರೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಪಕ್ಷಕ್ಕೆ ಕಾರ್ಯಕರ್ತರು ಅನಿವಾರ್ಯ, ಅವರ ಬಲದಿಂದ ಬಂಟ್ವಾಳದಲ್ಲಿ ರಮಾನಾಥ ರೈ ಮತ್ತೆ ಶಾಸಕರಾಗಲಿದ್ದಾರೆ ಎಂದು ಹೇಳಿದರು.
ಜಿ.ಪಂ.ಸದಸ್ಯ ಪದ್ಮಶೇಖರ್ ಜೈನ್, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ವಿ. ಶೆಟ್ಟಿ, ಬಂಟ್ವಾಳ ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಫ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಶೆಟ್ಟಿ, ಬಂಟ್ವಾಳ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಜಯಂತಿ ಪೂಜಾರಿ, ಯುವ ಕಾಂಗ್ರೇಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಎಪಿಎಂಸಿ ಮಾಜಿ ಅಧ್ಯಕ್ಷ ಪದ್ಮನಾಭ ರೈ, ಪುರಸಭಾ ಸದಸ್ಯ ಜನಾರ್ಧನ ಚೆಂಡ್ತಿಮಾರ್, ಪ್ರಮುಖರಾದ ಸುದರ್ಶನ್ ಜೈನ್, ಅಮ್ಮು ರೈ ಹರ್ಕಾಡಿ, ಮಾಯಿಲಪ್ಪ ಸಾಲ್ಯಾನ್,
ಜಗದೀಶ್ ಕೊಯಿಲ ಕಾರ್ಯಕ್ರಮ ನಿರ್ವಹಿಸಿದರು. ಜಿ.ಪಂ.ಸದಸ್ಯ ಎಂ.ಎಸ್.ಮಹಮ್ಮದ್ ವಂದಿಸಿದರು. ಈ ಸಂದರ್ಭದಲ್ಲಿ ಹಲವಾರು ಮಂದಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.