ಬಂಟ್ವಾಳ: ಆರ್.ಎನ್.ಎಸ್. ಶಿಕ್ಷಣ ಮತ್ತು ಉದ್ಯಮ ಸಂಸ್ಥೆಗಳ ಸಮೂಹದ ಸ್ಥಾಪಕ ಆರ್.ಎನ್. ಶೆಟ್ಟಿ ಅವರ ನಿಧನದಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಮಾಜಿ ಸಚಿವ ಬಿ. ರಮನಾಥ ರೈ ತಿಳಿಸಿದ್ದಾರೆ.
ಆತ್ಮೀಯರಲ್ಲಿ ಒಬ್ಬರಾಗಿದ್ದ ಅವರ ಅಗಲಿಕೆಯಿಂದ ನನಗೆ ವೈಯಕ್ತಿಕವಾಗಿ ಅತೀವ ನೋವುಂಟಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ಜನಿಸಿದ ಆರ್.ಎನ್. ಶೆಟ್ಟಿ ಅವರು ರಾಜ್ಯದ ಶಿಕ್ಷಣ ಮತ್ತು ಉದ್ಯಮ ರಂಗಗಳಲ್ಲಿ ಗಣನೀಯ ಸಾಧನೆ ಮಾಡಿದ್ದರು. ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆ ಅಪೂರ್ವವಾದುದು. ರಾಜ್ಯದ ಹಲವು ಜಲಾಶಯಗಳ ನಿರ್ಮಾಣ ಕಾಮಗಾರಿಗಳನ್ನು ನಿರ್ವಹಿಸಿದ್ದ ಶೆಟ್ಟಿ ಅವರು, ಕರ್ನಾಟಕದ ಪ್ರಗತಿಗೆ ಮಹತ್ವದ ಕೊಡುಗೆಗಳನ್ನು ನೀಡಿದವರು. ಕೊಡುಗೈ ದಾನಿಯಾಗಿದ್ದ ಆರ್.ಎನ್. ಶೆಟ್ಟಿ ಅವರು ಜಾತಿ, ಮತಗಳ ಭೇದವಿಲ್ಲದೆ ಸಹಾಯ ಕೇಳಿ ಬಂದ ಎಲ್ಲರಿಗೂ ನೆರವು ನೀಡುವ ಗುಣ ಹೊಂದಿದ್ದವರು. ಬಂಟ ಸಮುದಾಯದ ಪ್ರಗತಿಗೆ ಅವರ ಕೊಡುಗೆ ಅಪಾರವಾದುದು. ಜನಸ್ನೇಹಿ, ದೂರದೃಷ್ಟಿಯ ವ್ಯಕ್ತಿಯಾಗಿದ್ದ ಆರ್.ಎನ್.ಶೆಟ್ಟಿ ಅವರನ್ನು ಕಳೆದುಕೊಂಡು ನಾಡು ಬಡವಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ ಮತ್ತು ಕುಟುಂಬದವರಿಗೆ ಅವರ ಅಗಲಿಕೆಯ ನೋವು ಸಹಿಸುವ ಶಕ್ತಿ ದೊರಕಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಅವರು ತಿಳಿಸಿದ್ದಾರೆ.