ಬಂಟ್ವಾಳ: ಮಲ್ಲಿಗೆ ಪ್ರಿಯ ಬಂಟವಾಳದ ಶ್ರೀ ತಿರುಮಲ ವೆಂಕಟರಮಣ ದೇವಳದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆಯುವ 19 ನೇ ವರ್ಷದ ವಿಶ್ವರೂಪದರ್ಶನ ರವಿವಾರ ನಢಯಿತು.ಮುಂಜಾನೆ 4 ಗಂಟೆಯ ಬ್ರಾಹ್ಮಿ ಮುಹೂರ್ತದಲ್ಲಿ ದೇವಳದ ಅರ್ಚಕರಾದ ಶ್ರೀನಿವಾಸ ಭಟ್ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.ಈ ಸಂದರ್ಭ ಸೇರಿದ್ದ ಭಜಕರು ದೇವಳದ ಸುತ್ತ,ಹೊರಾಂಗಣ,ಒಳಾಂಗಣದಲ್ಲಿ ಜೋಡಿಸಿಟ್ಟಿದ್ದ ಹಣತೆದೀಪವನ್ನು ಏಕಕಾಲದಲ್ಲಿ ಬೆಳಗಿದರು. ದೇವಳದ ಹೊರಾಂಗಣದಲ್ಲಿ ಶಂಖ,ಚಕ್ರ,ಗದಾ,ಪದ್ಮ ಸಹಿತ ವಾಮನವತಾರ ದೃಶ್ಯ ಕಣ್ಮನಸೆಳೆಯಿತು. ಶ್ರೀ ಶಾರ್ವರಿ ನಾಮಸವತ್ಸರದ ಕಾರ್ತಿಕ ಶುದ್ದ ಅಷ್ಟಮಿಯ ಹಿನ್ನಲೆಯಲ್ಲಿ ನಡೆಯುವ ಈ ವಿಶ್ವರೂಪದರ್ಶನದಲ್ಲಿ ಶ್ರೀ ದೇವರಿಗೆ ಕಾಕಾಡರತಿ ಸಹಿತ ವಿಶೇಷಪೂಜೆ ನಡೆಯಿತು. ದೇವಳದ ಒಳಾಂಗಣ ಮತ್ತು ಶ್ರೀದೇವರನ್ನು ವಿಶೇಷವಾಗಿ ಹೂವಿನಿಂದ ಅಲಂಕೃತಗೊಳಿಸಲಾಗಿತ್ತು. ಅಗಮಿಸಿದ ಎಲ್ಲಾ ಭಕ್ತರಿಗೂ ಶ್ರೀದೇವರ ದಿವ್ಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತಲ್ಲದೆ ಲಡ್ಡುಪ್ರಸಾದವನ್ನು ವಿತರಿಸಲಾಯಿತು.ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿತ್ತು.ದೇವಳದ ಆಡಳಿತ ಮೊಕ್ತೇಸರರು,ಮೊಕ್ತೇಸರರು ಹಾಗೂ ಗಣ್ಯರು ಭಾಗವಹಿಸಿದ್ದರು.