ಬಂಟ್ವಾಳ: ಸರ್ವಿಸ್ ರಸ್ತೆಯ ಬದಿಯಲ್ಲಿ ಹಾದು ಹೋಗಿರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕುಡಿಯುವ ನೀರಿನ ಪೈಪ್ ಒಡೆದು ನೀರು ಹೊರ ಚಿಮ್ಮಿದ ಪರಿಣಾಮ ಬಿ.ಸಿರೋಡಿನ ಸರ್ವಿಸ್ ರಸ್ತೆಯಲ್ಲಿ ಕೆಲ ಹೊತ್ತುಗಳ ಕಾಲ ಕೃತಕ ನೆರೆ ಸೃಷ್ಟಿಯಾಯಿತು. ಕೆಲ ದಿನಗಳ ಹಿಂದೆಯಷ್ಟೇ ಇಲ್ಲಿ ಪೈಪ್ಲೈನ್ ದುರಸ್ತಿ ಕಾರ್ಯ ನಡೆಸಲಾಗಿತ್ತು. ಆದರೆ ದುರಸ್ತಿ ಸರಿಯಾಗದ ಕಾರಣ ನೀರು ಸರಬರಾಜಿನ ವೇಳೆ ಪೈಪ್ ಒಡೆದು ಈ ಅವಾಂತರ ಸೃಷ್ಟಿಯಾಯಿತು.
ರಸ್ತೆಯಿಡೀ ನೀರು ತುಂಬಿಕೊಂಡ ಕಾರಣ ಮಳೆಗಾಲದ ಸನ್ನಿವೇಷವನ್ನು ನೆನಪಿಸಿದಂತಾಯಿತು. ಪ್ರತೀ ಹನಿ ನೀರಿಗೂ ತೊಂದರೆ ಪಡುತ್ತಿದ್ದರೆ ಇಲ್ಲಿ ಯಥೇಚ್ಛವಾಗಿ ನೀರು ವ್ಯರ್ಥವಾಗುವುದನ್ನು ಕಂಡು ಜನ ಮರುಕ ಪಟ್ಟರು. ಅದೇ ಸ್ಥಳದಲ್ಲಿ ಮಂಗಳೂರಿಗೆ ತೆರಳುವ ಬಸ್ಸುಗಳು ನಿಲುಗಡೆಯಾಗುವುದರಿಂದ ಪ್ರಯಾಣಿಕರು ಬಸ್ಸ್ ಹತ್ತಲು, ಇಳಿಯಲು ಪರದಾಡಬೇಕಾಯಿತು. ನೀರು ಸರಬರಾಜನ್ನು ಸ್ಥಗಿತಗೊಳಿಸಿದ ಬಳಿಕ ರಸ್ತೆಯಲ್ಲಿ ಕೃತಕ ನೆರೆ ಇಳಿಯಿತು.