ಬಂಟ್ವಾಳ: ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ ತಾಲೂಕಿನ ಪುದು ಗ್ರಾಮದ ಸುಜೀರು ಶ್ರೀ ಮಂಗಳಾದೇವಿ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿ ಅಸ್ಥಿತ್ವಕ್ಕೆ ಬಂದಿದ್ದು ಅಧ್ಯಕ್ಷರಾಗಿ ಧಾರ್ಮಿಕ ಮುಂದಾಳು ಅರುಣ್ಕುಮಾರ್ ಶೆಟ್ಟಿ ನುಳಿಯಾಲುಗುತ್ತು ಅವರನ್ನು ಆಯ್ಕೆಗೊಳಿಸಲಾಯಿತು.
ಶನಿವಾರ ದೇವಸ್ಥಾನದಲ್ಲಿ ಪುದು ಗ್ರಾ.ಪಂ. ಪಿಡಿಓ ಹರೀಶ್ ಅವರ ಉಪಸ್ಥಿತಿಯಲ್ಲಿ ಈ ಆಯ್ಕೆ ನಡೆಯಿತು. ವ್ಯವಸ್ಥಾಪನ ಸಮಿತಿಯ ಸದಸ್ಯರನ್ನಾಗಿ ದೇವಸ್ಥಾನದ ಅರ್ಚಕ ಗಣೇಶ್ ಭಟ್, ಪಿ.ಲಕ್ಷ್ಮಣ್, ಮಾಲತಿ, ಮೀನಾಕ್ಷಿ, ಸುರೇಂದ್ರ ಕಂಬಳಿ, ಅರುಣ್ಕುಮಾರ್ ಶೆಟ್ಟಿ ನುಳಿಯಾಲುಗುತ್ತು, ಜಯ ಬೆಳ್ಚಾಡ, ಪ್ರವೀಣ್ ಕುಮಾರ್ ಶೆಟ್ಟಿ , ನಾಗೇಶ್ ಪೂಜಾರಿಯವರನ್ನು ಈಗಾಗಲೇ ನೇಮಕಗೊಳಿಸಲಾಗಿದ್ದು ಪಿಡಿಓ ಹೆಸರನ್ನು ಪ್ರಕಟಿಸಿದರು. ಈ ಸಂದರ್ಭ ನೂತನ ಅಧ್ಯಕ್ಷರನ್ನಾಗಿ ಅರುಣ್ಕುಮಾರ್ ಶೆಟ್ಟಿಯವರನ್ನು ಸರ್ವಾನುಮತದಿಂದ ಸದಸ್ಯರು ಆಯ್ಕೆಗೊಳಿಸಿದರು. ಧಾರ್ಮಿಕ ಪರಿಷತ್ ಸದಸ್ಯ ಪೊಳಲಿ ಗಿರಿಪ್ರಕಾಶ್ ತಂತ್ರಿ ಉಪಸ್ಥಿತರಿದ್ದು ಮಾರ್ಗದರ್ಶನ ಮಾಡಿದರು. ದೇವಸ್ಥಾನದ ಅನುವಂಶಿಕ ಅರ್ಚಕ ಅನಂತ ಭಟ್ ಉಪಸ್ಥಿತರಿದ್ದರು.
ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಅರುಣ್ಕುಮಾರ್ ಶೆಟ್ಟಿ ನುಳಿಯಾಲುಗುತ್ತು ಅವರು 20 ವರ್ಷಗಳಿಂದ ಸುಜೀರು ಶ್ರೀ ವೀರ ಹನುಮಾನ್ ಮಂದಿರದ ಗೌರವಾಧ್ಯಕ್ಷರಾಗಿ, ದೈವರಾಜ ಕೋರ್ದಬ್ಬು ದೈವಸ್ಥಾನದ ಆಡಳಿತ ಮೋಕ್ತೇಸರರಾಗಿ, ವಿಶ್ವ ಹಿಂದೂ ಪರಿಷತ್ತ್ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷರಾಗಿ, ಪ್ರಸ್ತುತ ಪುತ್ತೂರು ಜಿಲ್ಲಾ ಮಠ, ಮಂದಿರ ವಿಭಾಗದ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿಜಯ ಬ್ಯಾಂಕಿನಲ್ಲಿ 37 ವರ್ಷಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿರುವ ಅವರು ಮ್ಯಾನೇಜರ್ ಆಗಿ ನಿವೃತ್ತಗೊಂಡು ಸಾಮಾಜಿಕ, ಧಾರ್ಮಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಪುರಾತನ ದೇವಸ್ಥಾನ: ನೇತ್ರಾವತಿ ನದಿ ಕಿನಾರೆಯಲ್ಲಿ ಸುಮಾರು 800 ವರ್ಷಗಳಿಗಿಂತಲೂ ಅಧಿಕ ಪುರಾತನ ಎನ್ನಲಾಗಿರುವ ಸುಜೀರು ಶ್ರೀ ಮಂಗಳಾದೇವಿ ದೇವಸ್ಥಾನ ತಾಲೂಕಿನ ಜನರಿಗೇ ಅಪರಿಚಿತವಾಗಿ ಉಳಿದಿದೆ. ನವರಾತ್ರಿ ಉತ್ಸವ ಹಾಗೂ ಸಂಕ್ರಮಣದಂದು ಇಲ್ಲಿ ವಿಶೇಷ ಪೂಜೆ ಸಹಿತ ನಿತ್ಯ ತ್ರಿಕಾಲ ಪೂಜೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ದೇವಸ್ಥಾನಕ್ಕೆ ಸಂಪರ್ಕ ರಸ್ತೆ ಹಾಗೂ ದೇವಸ್ಥಾನದ ಜೀರ್ಣೊದ್ಧಾರ ಕೈಗೊಳ್ಳುವ ಬಗ್ಗೆ ತೀರ್ಮಾನಿಸುವುದಾಗಿ ವ್ಯವಸ್ಥಾಪನ ಮಂಡಳಿಯ ನೂತನ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ತಿಳಿಸಿದರು.