ಬಂಟ್ವಾಳ: ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಳ ಸಂಚಲನ ಸೇವಾ ಸಮಿತಿ ಟ್ರಸ್ಟ್ ವಿತಿಯಿಂದ ಅಭಿವೃದ್ಧಿಗೊಳ್ಳುತ್ತಿರುವ ಪಡುಮಲೆ ಕ್ಷೇತ್ರದ ಅಭಿವೃದ್ಧಿ ಕಾರ್ಯ ಹಾಗೂ ಬ್ರಹ್ಮಕಲಶೋತ್ಸವದ ಕುರಿತು ಬಂಟ್ವಾಳ ತಾಲೂಕಿನ ಪ್ರಮುಖರ ಸಮಾಲೋಚನಾ ಸಭೆ ಭಾನುವಾರ ಗಾಣದಪಡ್ಪುನಲ್ಲಿರುವ ಬ್ರಹ್ಮಶ್ರೀ ನಾರಾಯಣಗುರು ಸಭಾಂಗಣದಲ್ಲಿ ನಡೆಯಿತು.
ಟ್ರಸ್ಟ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಬಹುತೇಕ ಪೂರ್ಣಗೊಂಡಿದ್ದು, ಮುಂದಿನ ಮಾರ್ಚ್ ತಿಂಗಳ ಅಂತ್ಯ ಅಥವಾ ಎಪ್ರಿಲ್ ಪ್ರಾರಂಭದಲ್ಲಿ ಬ್ರಹ್ಮಕಲಶೋತ್ಸವ ನಡೆಸುವ ಯೋಜನೆ ಹಾಕಿಕೊಳ್ಳಲಾಗಿದೆ. ಚರಿತ್ರೆ-ಪುರಾಣಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಅಭಿವೃದ್ಧಿ ಕಾರ್ಯ ನಡೆಸಲಾಗಿದೆ. ಕ್ಷೇತ್ರಕ್ಕೆ 10 ಮಂದಿ ಹಕ್ಕುದಾರರು ಜಾಗವನ್ನು ಉಚಿತವಾಗಿ ನೀಡಿದ್ದು, ರಸ್ತೆಗೆ ಪುತ್ತೂರು ಶಾಸಕರು 50ಲಕ್ಷ ರೂ. ನೀಡಿದ್ದಾರೆ ಎಂದರು.
ಕ್ಷೇತ್ರದ ಮೊಕ್ತೇಸರ ವಿನೋದ್ ಆಳ್ವ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗಾಗಿ ಕಳೆದ ಹಲವು ವರ್ಷಗಳಿಂದ ಪ್ರಯತ್ನ ನಡೆಸಿ ಎಲ್ಲರನ್ನೂ ಜತೆ ಸೇರಿಸಿ ಈ ಕಾರ್ಯ ಮಾಡಲಾಗಿದೆ. ಕಾಮಗಾರಿಗಳಲ್ಲಿ 99.5 ಶೇ. ಪೂರ್ಣಗೊಂಡಿದೆ ಎಂದರು.
ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ಪ್ರಮುಖರಾದ ಬೆಳ್ತಂಗಡಿಯ ಯೋಗೀಶ್ಕುಮಾರ್ ನಡಕ್ಕರ್, ಪುತ್ತೂರಿನ ವಿಜಯಕುಮಾರ್ ಸೊರಕೆ, ಮಂಗಳೂರಿನ ದಿವಾಕರ್, ಪಂಜಿಕಲ್ಲು ಗರೋಡಿಯ ಆಡಳಿತದಾರ ಬಿ.ಪ್ರಕಾಶ್ ಜೈನ್ ಉಪಸ್ಥಿತರಿದ್ದರು.
ಸಮಿತಿ ಪ್ರಮುಖರಾದ ಚರಣ್ ಕೆ. ಅವರು ಮಾತನಾಡಿ, ಜನವರಿ 14ರಂದು ಕ್ಷೇತ್ರದ ಕಚೇರಿ ಹಾಗೂ ಅತಿಥಿ ಗೃಹ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿ ವಂದಿಸಿದರು.