ಬೆಂಗಳೂರು: ನಾಡಿನ ಹಿರಿಯ ಪತ್ರಕರ್ತ ರವಿ ಬೆಳೆಗರೆ ಅವರು ಹೃದಯಾಘಾತದಿಂದ ನಿಧನ ಹೊಂದಿದರು. ಶುಕ್ರವಾರ ಮಧ್ಯರಾತ್ರಿಯ ವೇಳೆ ಅವರಿಗೆ ಹೃದಾಯಘಾತವಾಗಿದ್ದು ತಕ್ಷಣ ಅವರನ್ನು ಅಪೋಲೋ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
1958 ಮಾರ್ಚ್ 15 ರಂದು ಬಯಲುಸೀಮೆ ಬಳ್ಳಾರಿಯಲ್ಲಿ ಜನಿಸಿದ ರವಿ ಬೆಳೆಗರೆ ಅಕ್ಷರ ಲೋಕಕ್ಕೆ ಪ್ರವೇಶ ಪಡೆದು ಬೆಂಗಳೂರಿಗೆ ಕಾಲಿಟ್ಟರು. “ಹಾಯ್ ಬೆಂಗ್ಳೂರ್” ಪತ್ರಿಕೆ ಮೂಲಕ ರಾಜ್ಯವನ್ನೇ ಆವರಿಸಿದರು.
ಸಂಯುಕ್ತ ಕರ್ನಾಟಕದಲ್ಲಿದ್ದಾಗ ಕರ್ಮವೀರಕ್ಕೆ ಬರೆದ ಅಪರಾಧ ಜಗತ್ತು ಮತ್ತು ರೌಡಿಗಳ ಕುರಿತಾದ ಸರಣಿ ಲೇಖನಗಳು ರವಿ ಬೆಳೆಗೆರೆ ಅವರನ್ನು ಇಡೀ ರೌಡಿ ಜಗತ್ತು ಮತ್ತು ಕನ್ನಡ ಪತ್ರಿಕೋದ್ಯಮ ತಿರುಗಿ ನೋಡುವಂತೆ ಮಾಡಿತು. ಅಲ್ಲಿಂದ ಮುಂದಕ್ಕೆ ಲಂಕೇಶ್ ಸೇರಿ ಹಲವು ಪತ್ರಿಕೆಗಳಿಗೆ ಆಗಾಗ ಬರೆಯುತ್ತಾ ಕೊನೆಗೆ ” ಹಾಯ್ ಬೆಂಗ್ಳೂರ್” ಶುರು ಮಾಡಿದರು.
ಹಾಯ್ ಬೆಂಗಳೂರು ಪತ್ರಿಕೆಯ ಪ್ರಭಾವ ಹೇಗಿತ್ತೆಂದರೆ ನಾಡಿನುದ್ದಕ್ಕೂ ಸಾವಿರಾರು ಕಪ್ಪು ಬಿಳುಪು ಟ್ಯಾಬ್ಲಾಯ್ಡ್ ಪತ್ರಿಕೆಗಳು ಶುರುವಾದವು. ಆ ಹೊತ್ತಲ್ಲಿ ಲಂಕೇಶ್, ಅಗ್ನಿ ಸೇರಿ ಹಲವು ಪತ್ರಿಕೆಗಳು ಟ್ಯಾಬ್ಲಾಯ್ಡ್ ಜಗತ್ತಿನಲ್ಲಿ ಹೆಜ್ಜೆ ಗುರುತು ಮೂಡಿಸಿದ್ದವರಾದರೂ ತನ್ನ ಭಿನ್ನ ಅಭಿರುಚಿ, ಬರವಣಿಗೆ ಶೈಲಿಯಿಂದಾಗಿ ಕಪ್ಪು ಬಿಳುಪಿನಲ್ಲೇ ನಾಡಿನಾದ್ಯಂತ ಹೆಚ್ಚು ಪ್ರಸಾರದಲ್ಲಿರುವಂತೆ ನೋಡಿಕೊಂಡರು.
1995 ನಲ್ಲಿ ಹಾಯ್ ಬೆಂಗಳೂರು ಆರಂಭಿಸಿ ಕೊರೊನಾ ಪ್ರಪಂಚವನ್ನು ಆಕ್ರಮಿಸಿಕೊಳ್ಳುವವರೆಗೂ ಒಂದು ವಾರವೂ ದಣಿವರಿಯದೆ ಪತ್ರಿಕೆ ನಡೆಸಿದರು. ಜತೆಗೆ ಯುವ ಮನಸ್ಸುಗಳಿಗಾಗಿ “ಓ ಮನಸೇ” ಕೂಡ ತಂದರು. ಅದನ್ನೂ ಯಶಸ್ವಿ ಗೊಳಿಸಿದರು.
ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದರಾದರೂ ಬೋಧನೆ ನಿಲ್ಲಿಸಿ ಬರವಣಿಗೆ ಶುರು ಮಾಡಿದ ಮೇಲೆ ಅಪಾರ ಸಂಪತ್ತು ಗಳಿಸಿದರು. ಸಂಪತ್ತು ಕೈ ಸೇರಿದ ಮೇಲೆ ಮತ್ತೆ ಶಿಕ್ಷಣ ಲೋಕದ ಕೈ ಹಿಡಿದು “ಪ್ರಾರ್ಥನಾ’ ಶಾಲೆ ಆರಂಭಿಸಿದರು. ಸಾವಿರಾರು ಬಡ ಮಕ್ಕಳಿಗೆ ಉಚಿತ ಶಿಕ್ಷಣದ ಜತೆಗೆ , ಕಷ್ಟ ಎಂದು ಬಂದವರ ಮಕ್ಕಳಿಗೆಲ್ಲಾ ಕೈಲಾದಷ್ಟು ಕೊಡಿ ಎಂದು ಕೊಟ್ಟಷ್ಟೇ ಪಡೆದು ಶಾಲೆಗೆ ಸೇರಿಸಿಕೊಂಡರು.
ಇದೇ ಪ್ರಾರ್ಥನಾ ಶಾಲೆಯಲ್ಲಿ ಮಲಗಿದ್ದಾಗಲೇ ಶುಕ್ರವಾರ ಮಧ್ಯ ರಾತ್ರಿ 12 ಗಂಟೆ ಸುಮಾರಿಗೆ ಹೃದಯಾಘಾತ ಆಗಿದೆ. ತಕ್ಷಣ ಇವರನ್ನು ಅಪೋಲೋ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ನಸುಕಿನ ಒಂದು ಗಂಟೆ ಸುಮಾರಿಗೆ ನಿಧನರಾಗಿದ್ದಾರೆ.
ಶುಕ್ರವಾರ ಬೆಳಗ್ಗೆ 9 ಗಂಟೆಯಿಂದ ಪದ್ಮನಾಭನಗರದ ಪ್ರಾರ್ಥನಾ ಶಾಲೆ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.