ಬಂಟ್ವಾಳ: ಬಿಜೆಪಿಯ ಆರೋಪಗಳಿಂದ ಹತಾಶರಾಗಿ ಹರಿಕೃಷ್ಣ ಬಂಟ್ವಾಳರನ್ನು ಬಂಧಿಸಿ ಎಂದು ಕಾಂಗ್ರೆಸ್ ನಾಯಕರು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ ಎಂದು ಬಿಜೆಪಿ ಯುವಮೋರ್ಛಾದ ಜಿ.ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ ಹೇಳಿದ್ದಾರೆ.
ಅವರು ಬುಧವಾರ ಸಂಜೆ ಬಿಜೆಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಪೊಲೀಸ್ ಠಾಣೆಗಳೆಂದರೆ ರೈ ಯವರ ಕುಟುಂಬದ ಮನೆಯಲ್ಲ, ಗೂಂಡಾಗಿರಿಗೆ ಬೆಂಬಲ ನೀಡುವ ಸ್ಥಳವಲ್ಲ. ಈ ಹಿಂದೆಯೂ ಸುಳ್ಳು ಆರೋಪಗಳ ಮೂಲಕ ಹಿಂದೂ ನಾಯಕರನ್ನು ಬಂಧಿಸಲು ಕಾಂಗ್ರೇಸ್ ಯತ್ನಿಸಿದೆ ಎಂದು ಆರೋಪಿಸಿದರು. ಹರಿಕೃಷ್ಣ ಬಂಟ್ವಾಳ್ ಶಾಸಕರಿಗೆ ಕಂಟಕವಾಗಿಲ್ಲ ಬದಲಾಗಿ ಕಾಂಗ್ರೆಸ್ ಹಾಗೂ ರಮಾನಾಥ ರೈಗೆ ಕಂಟಕವಾಗಿದ್ದಾರೆ ಎಂದ ಅವರು ಹಿಂದೂಗಳ ವಿರುದ್ದ ಮುಸಲ್ಮಾನರನ್ನು ಎತ್ತಿಕಟ್ಟಿ ಕೋಮುಗಲಭೆ ಸೃಷ್ಟಿಸಿದ್ದೇ ರೈ ಯವರ ಕೊಡುಗೆ ಎಂದು ಟೀಕಿಸಿದರು.
ಕಾರಿಂಜ ಬಳಿ ಕಲ್ಲಿನ ಕೋರೆ ಕಾನೂನು ಪ್ರಕಾರವಾಗಿ ಬಂದ್ ಆಗಿದ್ದರೂ ಅಕ್ರಮವಾಗಿ ನಡೆಯುತ್ತಿತ್ತು. ತನ್ನ ಬಲಗೈ ಬಂಟನನ್ನು ರಕ್ಷಿಸುವ ಕೆಲಸ ಮಾಡಿದ್ದೀರಿ. ಭಾರತೀ ಕೊಲೆಪ್ರಕರಣದ ತನಿಖೆಯನ್ನು ಮುಚ್ಚಿ ಹಾಕಿದ್ದು ನೀವೇ. ಆಗ ನಿಮ್ಮ ಸರಕಾರವಿದ್ದು ನೀವು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದೀರಿ. ಗೊಂದಲದ ಹೇಳಿಕೆಯನ್ನು ನೀಡುವ ಬದಲು ಅಭಿವೃದ್ಧಿ ಮತ್ತು ಶಾಂತಿಯ ಬಂಟ್ವಾಳಕ್ಕೆ ಬೆಂಬಲಕೊಡಿ. ೩೦ ವರ್ಷಗಳ ರಾಜಕಾರಣದಲ್ಲಿ ಮಾಡದ ಅಭಿವೃದ್ಧಿಯನ್ನು ಇದೀಗ ಮಾಡಲು ಹೊರಟ್ಟಿದ್ದೀರಿ. ಸಿಎಎ ವಿರುದ್ಧದ ವಿಚಾರದಲ್ಲಿ ಹಿಂದೂ ವಿರೋಧಿಯಾಗಿದ್ದ ನಿಮ್ಮ ನಿಲುವುಗಳಿಗೆ ಮುಂದಿನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜನತೆ ಉತ್ತರ ನೀಡಲಿದ್ದಾರೆ ಎಂದರು.
ಬಿಜೆಪಿ ಯುವಮೋರ್ಛಾದ ಬಂಟ್ವಾಳ ವಿಧಾನ ಕ್ಷೇತ್ರ ಸಮಿತಿ ಅಧ್ಯಕ್ಷ ಪ್ರದೀಪ್ ಅಜ್ಜಿಬೆಟ್ಟು, ಉಪಾಧ್ಯಕ್ಷರಾದ ಸುರೇಶ್ ಕೋಟ್ಯಾನ್ ಕಾರ್ತಿಕ್ ಬಲ್ಲಾಳ್, ವಿನೋದ್ ಶೆಟ್ಟಿ ಪಟ್ಲ, ಕಾರ್ಯದರ್ಶಿಗಳಾದ ಹೇಮಂತ್ ಮಾಣಿ, ದಯಾನಂದ್ ಎಡ್ತೂರು, ಕಾರ್ತಿಕ್ ಬಲ್ಲಾಳ್ ಕೋಶಾಧಿಕಾರಿ ಶೈಲೇಶ್ ಬಿ.ಸಿ.ರೋಡ್, ಅಶ್ವತ್ ರಾವ್ ಬಾಳಿಕೆ, ದಿನೇಶ್ ಶೆಟ್ಟಿ ದಂಬೆದಾರ್ ಮೊದಲಾದವರು ಉಪಸ್ಥಿತರಿದ್ದರು.