ಬಂಟ್ವಾಳ: ಮಾಜಿ ಸಚಿವ ಬಿ. ರಮನಾಥ ರೈಯವರ ಬಗ್ಗೆ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಅವಹೇಳನಕಾರಿಯಾಗಿ ಭಾಷಣ ಮಾಡಿದ್ದು ಅವರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಪ್ರಶಾಂತ್ ಕೋಟ್ಯಾನ್ ಎಂಬವರು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇರ್ವತ್ತೂರು ಗ್ರಾಮದಲ್ಲಿ ನಡೆದ ಬಿಜೆಪಿಯ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಹರಿಕೃಷ್ಣ ಬಂಟ್ವಾಳ್ ಅವರು ರಮಾನಾಥ ರೈಯವರನ್ನು ಉದ್ದೇಶಿಸಿ ಅವಹೇಳಕಾರಿಯಾಗಿ ಭಾಷಣ ಮಾಡಿದ್ದಾರೆ ಹಾಗೂ ಭಾಷಣದ ವಿಡಿಯೂ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡಲಾಗಿದೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಎಸ್ಡಿಪಿಐ ದೂರು:
ಎಸ್ಡಿಪಿಐ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಸಮಿತಿಯ ಸದಸ್ಯ ಇದ್ರೀಸ್ ಎಂಬವರು ಹರಿಕೃಷ್ಣ ಬಂಟ್ವಾಳ್ ವಿರುದ್ದ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೂಡುಪಡುಕೋಡಿ ಮತು ಇರ್ವತ್ತೂರು ಗ್ರಾಮಗಳಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಕುಟುಂಬ ಮಿಲನ ಕಾರ್ಯಕ್ರಮಲ್ಲಿ ಹರಿಕೃಷ್ಣ ಬಂಟ್ವಾಳ್, ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಲು ೫ ಲಕ್ಷ ರೂಪಾಯಿ ನೀಡುವಂತೆ ಶಾಸಕ ರಾಜೇಶ್ ನಾಯ್ಕ್ ಬಳಿ ಎಸ್ಡಿಪಿಐ ಪಕ್ಷದವರು ಹೇಳಿದ್ದಾರೆ ಎನ್ನುವ ಸುಳ್ಳು ಹಾಗೂ ನಿರಾಧಾರ ಆರೋಪ ಮಾಡಿದ್ದಾರೆ. ಇದು ಪಕ್ಷದ ಮೇಲೆ ಗಂಭೀರ ಪರಿಣಾಮ ಬೀರಿದ್ದು ಸಮಾಜದಲ್ಲಿ ನಕರಾತ್ಮಕ ಭಾವನೆ ಮೂಡಿಸಿದೆ. ಆದ್ದರಿಂದ ಹರಿಕೃಷ್ಣ ಬಂಟ್ವಾಳ್ ಹಾಗೂ ಕಾರ್ಯಕ್ರಮ ಆಯೋಜಕರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
ನೈತಿಕ ಹಕ್ಕಿಲ್ಲ
ಮಾಜಿ ಸಚಿವ ಬಿ. ರಮಾನಾಥ ರೈಯವರು ಬಂಟ್ವಾಳ ಪುರಸಭಾ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಬೇರೆ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿ ಎಷ್ಟು ವ್ಯವಹಾರ ನಡೆಸಿದ್ದಾರೆ ಎಂದು ಹರಿಕೃಷ್ಣ ಬಂಟ್ವಾಳ್ ಸ್ಪಷ್ಟ ಪಡಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನಕಾರ್ಯದರ್ಶಿ ಚಂದ್ರಶೇಖರ ಪೂಜಾರಿ ಆಗ್ರಹಿಸಿದ್ದಾರೆ. ಪಕ್ಷಾಂತರಿಗಳಿಗೆ ಮಾಜಿ ಸಚಿವ ರಮಾನಾಥ ರೈಯವರ ಬಗ್ಗೆ ಮಾತಾಡುವ ನೈತಿಕ ಹಕ್ಕಿಲ್ಲ. ರೈಯವರು ೩೦ ವರ್ಷಗಳ ಕಾಲ ಶಾಸಕರಾಗಿ, ಸಚಿವರಾಗಿ ಜನ ಸಾಮಾನ್ಯರ ಕೆಲಸ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಅಭಿವೃದ್ಧಿಗೆ, ಅಪಾರ ಕೊಡುಗೆ ನೀಡಿದ್ದಾರೆ. ಹರಿಕೃಷ್ಣ ಬಂಟ್ವಾಳರು ಜಿಲ್ಲೆಯ ಜನತೆಗೆ ಯಾವ ಸೇವೆ ನೀಡಿದ್ದಾರೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.