ಬಂಟ್ವಾಳ: ಕೇಂದ್ರ ಸರಕಾರ ಜಾರಿಗೊಳಿಸಿರುವ ಯೋಜನೆಗಳನ್ನು ಪಡೆದುಕೊಳ್ಳುವ ಸಂದರ್ಭ ಬ್ಯಾಂಕ್ ಗಳಲ್ಲಿ ಸಾರ್ವಜನಿಕರಿಗೆ ಆಗುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಬಂಟ್ವಾಳ ಶಾಸಕರ ಕಚೇರಿ ಬ್ಯಾಂಕ್ ಅಧಿಕಾರಿಗಳು ಹಾಗೂ ಗ್ರಾಹಕರ ನಡುವೆ ಕೊಂಡಿಯಾಗಿ ಕೆಲಸ ಮಾಡಲಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ಅವರು ಬಿ.ಸಿ.ರೋಡಿನ ರಂಗೋಲಿ ಸಭಾಂಗಣದಲ್ಲಿ ಸೋಮವಾರ ನಡೆದ ಕೇಂದ್ರ ಸರಕಾರದ ಜನಪರ ಯೋಜನೆಗಳ ಮಾಹಿತಿ, ಬ್ಯಾಂಕ್ ಸೇವೆಗಳ ಕುಂದು ಕೊರತೆ ನಿವಾರಣೆ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮೀಣ ಭಾಗದ ಹಾಗೂ ಬಡ ಗ್ರಾಹಕರಿಗೆ ತಮ್ಮ ಬ್ಯಾಂಕಿಂಗ್ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಬ್ಯಾಂಕ್ ಅಧಿಕಾರಿಗಳೊಂದಿಗೆ ನೇರವಾಗಿ ವ್ಯವಹರಿಸಲು ಸಾಧ್ಯವಾಗುವುದಿಲ್ಲ ಆದ್ದರಿಂದ ಜನರು ತಮ್ಮ ಸಮಸ್ಯೆಗಳನ್ನು ಶಾಸಕರ ಕಚೇರಿಯಲ್ಲಿ ತಿಳಿಸಿದ್ದಲ್ಲಿ ಬ್ಯಾಂಕ್ ನ ಉನ್ನತ ಅಧಿಕಾರಿಗಳ ಮೂಲಕ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಉನ್ನತ ಹುದ್ದೆಗಳಲ್ಲಿ ಹೆಚ್ಚಿನ ಸಂಖ್ಯೆಯ ಕನ್ನಡಿಗರೇತರರು ಕಾರ್ಯನಿರ್ವಹಿಸುತ್ತಿರುವುದು ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ಸಮಸ್ಯೆಗಳಾಗಿರುವುದು ಸಹಜ. ರಾಜ್ಯದ ಶೇ.10ರಷ್ಟು ವಿದ್ಯಾರ್ಥಿಗಳು ಮಾತ್ರ ಆಸಕ್ತಿ ವಹಿಸಿ ಪರೀಕ್ಷೆ ಬರೆಯುವುದು ಇದಕ್ಕೆ ಕಾರಣವಾಗಿದೆ. ಈ ಬಗ್ಗೆ ಸರಕಾರದ ಮಟ್ಟದಲ್ಲಿ ಗಮನ ಹರಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುವ ಯೋಚನೆ ಮಾಡಲಾಗಿದೆ ಎಂದರು.
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡಿ ದೇಶದ ಜಿಡಿಪಿ ಏರುಗತಿಯಲ್ಲಿ ಸಾಗುತ್ತಿದ್ದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆರ್ಥಿಕ ಚೇತರಿಕೆ ಕಾಣುತ್ತಿದೆ ಎಂದರು. ಬ್ಯಾಂಕ್ ಅಧಿಕಾರಿಗಳು ತನ್ನ ಕೆಲಸದ ಮೂಲಕ ದೇಶ ಸೇವೆ ಮಾಡುತ್ತಿದ್ದೇನೆ ಎನ್ನುವ ಸೇವಾ ಮನೋಭಾವನೆಯಿಂದ ಕೆಲಸ ಮಾಡಿದಾಗ ಹಾಗೂ ಸಾಲ ಪಡೆಯುವ ಗ್ರಾಹಕರು ಕೂಡ ತಾನು ಸಕಾಲದಲ್ಲಿ ಸಾಲ ಮರುಪಾವತಿ ಮಾಡುತ್ತೇನೆ ಎನ್ನುವ ಬದ್ದತೆ ವ್ಯಕ್ತಪಡಿಸಿದಾಗ ಬ್ಯಾಂಕಗಳು ಉತ್ತಮ ಸೇವೆ ನೀಡಲು ಸಾಧ್ಯವಿದೆ ಎಂದರು.
ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ, ಮೋದಿಯವರ ಯೋಜನೆಗಳು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಲು ಬ್ಯಾಂಕ್ ನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಹಕಾರಬೇಕು ಎಂದರು.
ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯಸ್ಥ ಪ್ರವೀಣ್ ಎಂ.ಬಿ. ಮಾತನಾಡಿ ಅರ್ಜಿಗಳನ್ನು ತಿರಸ್ಕರಿಸುವ ಮೊದಲು ಶಾಖಾ ಪ್ರಬಂಧಕರು ಮೇಲಾಧಿಕಾರಿಗಳ ಗಮನಕ್ಕೆ ತನ್ನಿ, ಬ್ಯಾಂಕ್ ಗಳಲ್ಲಿ ಗ್ರಾಹಕರು ಸಿಬಿಲ್ ರೇಟಿಂಗ್ ಕಡಿಮೆಯಾಗದಂತೆ ಎಚ್ಚರಿಕೆಯಿಂದ ವ್ಯವಹಾರ ನಡೆಸಿ ಎಂದು ತಿಳಿಸಿದರು.
ಸಭೆಯಲ್ಲಿ ಸ್ವ ಉದ್ಯೋಗ ಯೋಜನೆಗಳಲ್ಲಿ ಗ್ರಾಹಕರಿಗೆ ಆಗುತ್ತಿರುವ ತೊಂದರೆ ಸಹಿತ ಅನೇಕ ದೂರುಗಳು ಗ್ರಾಹಕರಿಂದ ಕೇಳಿ ಬಂದವು. ಇಂತಹ ಸಮಸ್ಯೆಗಳಿಗೆ ಕಾರಣ ಹಾಘೂ ಪರಿಹರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಲೀಡ್ ಬ್ಯಾಂಕ್ ಮುಖ್ಯಸ್ಥರು ತಿಳಿಸಿದರು. ಜಿಲ್ಲಾ ತರಬೇತಿ ಕೇಂದ್ರ ಸಹಾಯಕ ನಿರ್ದೇಶಕ ವಿವೇಕಾನಂದ ಮಾಹಿತಿ ನೀಡಿದರು. ಪಿ.ಎಮ್ ಸ್ವಾನಿಧಿ ಅಭಿಯಾನ ವ್ಯವಸ್ಥಾಪಕಿ ಐರಿನ್, ಮುದ್ರಾ ಯೋಜನೆ ಬಗ್ಗೆ ವೆಂಕಟೇಶ್ ವಿಮಾ ಸೌಲಭ್ಯದ ಬಗ್ಗೆ ಜಯಂತ್ ಶೆಟ್ಟಿ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭ ಬಂಟ್ವಾಳ ಪುರಸಭೆ ವತಿಯಿಂದ ಬೀದಿ ವ್ಯಾಪರಿಗಳಿಗೆ ಸಾಲ ಮಂಜೂರಾತಿ ಆದೇಶ ಹಾಗೂ ಗುರುತಿನ ಚೀಟಿ ವಿತರಿಸಲಾಯಿತು. ಈ ಸಂದರ್ಭ ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಸಮುದಾಯ ಸಂಘಟಕಿ ಉಮಾವತಿ ಉಪಸ್ಥಿತರಿದ್ದರು. ಆರ್ಥಿಕ ಸಾಕ್ಷರತ ಕೇಂದ್ರ ಸಮಾಲೋಚಕ ಲತೇಶ್ ಸ್ವಾಗತಿಸಿ, ಜಿಲ್ಲಾ ಲೀಡ್ ಬ್ಯಾಂಕ್ ಸಿಬ್ಬಂದಿ ಗಿರೀಶ್ ವಂದಿಸಿದರು.