ಬಂಟ್ವಾಳ: ದುಷ್ಕರ್ಮಿಗಳಿಂದ ಮಾರಣಾಂತಿಕ ವಾಗಿ ಹಲ್ಲೆಗೊಳಗಾಗಿ ಪ್ರಸ್ತುತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫರಂಗಿಪೇಟೆ ಕೊಟ್ಟಿಂಜ ನಿವಾಸಿ ಛಾಯಾಚಿತ್ರ ಗ್ರಾಹಕ, ಬಿಜೆಪಿ ಕಾರ್ಯಕರ್ತ ದಿನೇಶ್ ಶೆಟ್ಟಿ ಕೊಟ್ಟಿಂಜ ಅವರನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಚಿಕಿತ್ಸೆ ನೆರವಿಗಾಗಿ ವೈಯಕ್ತಿಕ ನೆಲೆಯಲ್ಲಿ ರೂ.1 ಲಕ್ಷ ನೀಡಿದ್ದಾರೆ.
ಅ.28 ರಂದು ಬುಧವಾರ ರಾತ್ರಿ 7.30 ಸುಮಾರಿಗೆ ಪುದು ಗ್ರಾಮದ ಕೊಟ್ಟಿಂಜೆ ನಿವಾಸಿ ದಿನೇಶ್ ಶೆಟ್ಟಿ ಅವರ ಫರಂಗಿಪೇಟೆ ಸ್ಟುಡಿಯೋಕ್ಕೆ ನಾಲ್ಕು ಮಂದಿ ದುಷ್ಕರ್ಮಿಗಳು ನುಗ್ಗಿ ತಲೆ ಹಾಗೂ ಹೊಟ್ಟೆಗೆ ಗಂಭೀರವಾಗಿ ಹಲ್ಲೆ ನಡೆಸಿದ್ದರು. ಘಟನೆಯಿಂದ ಗಂಭೀರ ವಾಗಿ ಗಾಯಗೊಂಡ ದಿನೇಶ್ ಶೆಟ್ಟಿ ಅವರು ಮಂಗಳೂರು ಎ.ಜೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗುರುವಾರ ಸಂಜೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ , ಪುದು ಜಿ.ಪಂ.ಸದಸ್ಯ ರವೀಂದ್ರ ಕಂಬಳಿ, ಪ್ರಮುಖರಾದ ಗಣೇಶ್ ರೈ ಮಾಣಿ ಮತ್ತಿತರರು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು.
ಜೊತೆಗೆ ಚಿಕಿತ್ಸೆಯ ನೆರವಿಗಾಗಿ ಶಾಸಕರು ಜಿ.ಪಂ.ಸದಸ್ಯ ರವೀಂದ್ರ ಕಂಬಳಿ ಅವರ ಮೂಲಕ ರೂ 1. ಲಕ್ಷ ಹಣವನ್ನು ನೀಡಿದ್ದಾರೆ.
ಆಸ್ಪತ್ರೆಯ ಮುಖ್ಯಸ್ಥ ಡಾ.ಪ್ರಶಾಂತ್ ಮಾರ್ಲ ಅವರ ಜೊತೆ ಇವರ ಆರೋಗ್ಯ ದ ಬಗ್ಗೆ ವಿಚಾರಿಸಿ ಯಾವುದೇ ತೊಂದರೆಯಾಗದ ರೀತಿಯಲ್ಲಿ ಚಿಕಿತ್ಸೆ ನೀಡುವಂತೆ ಎಂದು ಅವರು ತಿಳಿಸಿದ್ದಾರೆ. ದಿನೇಶ್ ಶೆಟ್ಟಿ ಕೊಟ್ಟಿಂಜ ಅವರ ಚಿಕಿತ್ಸೆಗೆ ಮಾನವೀಯ ಹೃದಯಗಳ ನೆರವಿನ ಹಸ್ತ ಬೇಕಿದೆ ಎನ್ನುವ ವರದಿ ಅಕ್ಷರ ನ್ಯೂಸ್ ನಲ್ಲಿ ಪ್ರಕಟಗೊಂಡಿತ್ತು.