ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯನ್ನು ವಾಹನ ಸಂಚಾರ ಮತ್ತು ಜನ ಸಂಚಾರಕ್ಕೆ ಯೋಗ್ಯಗೊಳಿಸುವಂತೆ ಸಂಪೂರ್ಣ ಡಾಮರೀಕರಣ ಅಥವಾ ಕಾಂಕ್ರೀಟಿಕರಣ ಮಾಡುವಂತೆ ಒತ್ತಾಯಿಸಿ ನ.೧೦ ರಂದು ಮಂಗಳವಾರ ಬಿ.ಸಿ.ರೋಡಿನ ಮೇಲು ಸೇತುವೆಯ ಕೆಳಗಡೆ ಪ್ರತಿಭಟನಾ ಸಭೆ ಮತ್ತು ಸಾಂಕೇತಿಕ ರಸ್ತೆ ತಡೆ ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ಮತ್ತು ಬಂಟ್ವಾಳ ತಾಲೂಕು, ಟೂರಿಸ್ಟ್ ವಾಹನ ಚಾಲಕ ಮಾಲಕರ ಸಂಘ, ವಿವಿಧ ಟೆಂಪೋ, ಗೂಡ್ಸ್ ಟೆಂಪೋ, ಅಟೋ ರಿಕ್ಷಾ ಚಾಲಕರ ಸಂಘಗಳ ಜಂಟಿ ಆಶ್ರಯದಲ್ಲಿ ನಡೆಯಲಿದೆ.
ಇತ್ತೀಚೆಗೆ ಬಿಸಿರೋಡಿನ ರಕ್ತೇಶ್ವರಿ ದೇವಸ್ಥಾನದ ಸಭಾ ಭವನದಲ್ಲ್ಲಿ ನಡೆದ ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ಮತ್ತು ವಿವಿಧ ವಾಹನ ಚಾಲಕ ಮಾಲಕ ಸಂಘಟನೆಗಳ ಜಂಟಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕಳೆದ ಹಲವು ವರ್ಷಗಳಿಂದ ರಸ್ತೆ ಅಗಲೀಕರಣದ ಕೆಲಸ ಪೂರ್ತಿಗೊಂಡಿದ್ದರೂ ಬಿ.ಸಿ.ರೋಡು ಪಟ್ಟಣದಲ್ಲಿ ಹಾದು ಹೋಗುವ ರಸ್ತೆಗಳು ಟ್ರಾಫಿಕ್ ಸಮಸ್ಯೆ, ಜನಸಂಚಾರಕ್ಕೂ ಅಯೋಗ್ಯವಾಗಿದೆ. ಬಿ.ಸಿ.ರೋಡು ಪಟ್ಟಣದ ಹೃದಯ ಭಾಗದಲ್ಲಿ ತಾಲೂಕು ಕಛೇರಿ, ಕೋರ್ಟು ಕಛೇರಿ, ಪೊಲೀಸ್ ಠಾಣೆ ಸೇರಿದಂತೆ ವಿವಿಧ ಕಚೇರಿಗಳು, 3 ದೇವಸ್ಥಾನಗಳು ಜನರ ಪ್ರಮುಖ ಚಟುವಟಿಕೆಗಳ ಕೇಂದ್ರವಾಗಿರುವುದರಿಂದ ಗ್ರಾಮೀಣ ಪ್ರದೇಶದ ಜನರ ಓಡಾಟವು ಜಾಸ್ತಿಯಾಗಿರುತ್ತದೆ.
ಕೆಲವೊಮ್ಮೆ ಬಿ.ಸಿ.ರೋಡು ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆಯ ದೊಡ್ಡ ದೊಡ್ಡ ಹೊಂಡಗಳಿರುವುದರಿಂದ ಹೊಂಡ ತಪ್ಪಿಸಲು ವಾಹನ ಸವಾರರು ವಾಹನಗಳನ್ನು ಅಡ್ಡಾ ದಿಡ್ಡಿ ಚಲಾಯಿಸುತ್ತಿರುವುದರಿಂದ ಜನರಿಗೆ ರಸ್ತೆ ದಾಟುವುದೇ ಪ್ರಯಾಸದ ಕೆಲಸವಾಗಿದೆ. ಸಣ್ಣ ಪುಟ್ಟ ಅಪಘಾತಗಳು ಸರ್ವೆ ಸಾಮಾನ್ಯವಾಗಿದೆ. ಲಕ್ಷಾಂತರ ರೂಪಾ ಮೌಲ್ಯದ ವಾಹನಗಳು ಹೊಂಡಗಳಿಂದಾಗಿ ಜಖಂ ಗೊಂಡು ವಾಹನ ಮಾಲಕರು ನಷ್ಟ ಅನುಭವಿಸುವ ಪರಿಸ್ಥಿತಿ ಇದೆ. ಈ ಎಲ್ಲಾ ಸಮಸ್ಯೆಗಳನ್ನು ಚರ್ಚಿಸಿ ಸಂಬಂಧಪಟ್ಟ ಇಲಾಖೆ ಮತ್ತು ಸರಕಾರವನ್ನು ಒತ್ತಾಯಿಸುವ ನಿಟ್ಟಿನಲ್ಲಿ ಈ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಸಮನ್ವಯ ಸಮಿತಿ ಅಧ್ಯಕ್ಷ ಬಿ.ಎಂ.ಪ್ರಭಾಕರ ದೈವಗುಡ್ಡೆ, ಪ್ರಧಾನ ಕಾರ್ಯದರ್ಶಿ ಬಿ.ಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.