ಬಂಟ್ವಾಳ: ತಾಲೂಕಾಡಳಿತದ ವತಿಯಿಂದ 65 ನೇ ಕನ್ನಡ ರಾಜ್ಯೋತ್ಸವವನ್ನು ಬಿ.ಸಿ.ರೋಡಿನ ಮಿನಿ ವಿಧಾನ ಸೌಧದಲ್ಲಿ ಆಚರಿಸಲಾಯಿತು.
ಧ್ವಜಾರೋಹಣ ನೆರವೇರಿಸಿದ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್ ಮಾತನಾಡಿ, ಕನ್ನಡ ಭಾಷೆಯನ್ನು ಪ್ರೀತಿಸಿ, ಬೆಳೆಸುವುದು ನಮ್ಮ ಕರ್ತವ್ಯವಾಗಿದ್ದು, ರಾಜ್ಯೋತ್ಸವ ಸಂದರ್ಭ ನಾಡು ಕಟ್ಟಿದ ಮಹಾಪುರುಷರ ಸ್ಮರಣೆ ಮಾಡಬೇಕು, ಬಂಟ್ವಾಳ ತಾಲೂಕಿನವರೇ ಆದ ಪಂಜೆ ಮಂಗೇಶರಾವ್, ಏರ್ಯ ಲಕ್ಷ್ಮೀನಾರಾಯಣ ಆಳ್ವರಂಥ ಅನೇಕರು ಕನ್ನಡ ಭಾಷಾ ಬೆಳವಣಿಗೆಗಾಗಿ ಶ್ರಮಿಸಿದ್ದಾರೆ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ ರಾಜ್ಯೋತ್ಸವದ ಸಂದರ್ಭ ಗ್ರಾಮೀಣ ಪ್ರತಿಭೆಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸುವುದು ಉತ್ತಮ ಕಾರ್ಯ, ಕನ್ನಡ ನಾಡು, ನುಡಿಗಾಗಿ ಹೋರಾಡಿದ ಮಹನೀಯರನ್ನು ನೆನಪಿಸುವುದರ ಜೊತೆಗೆ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವುದು ಇಂದಿನ ಅಗತ್ಯ ಎಂದರು.
ಶಿಕ್ಷಕ ವಿಠಲ ನಾಯಕ್ ಪ್ರಧಾನ ಭಾಷಣ ಮಾಡಿ ಕನ್ನಡ ಉಳಿದರೆ ಕನ್ನಡ ಸಂಸ್ಕೃತಿಯೂ ಉಳಿಯುತ್ತದೆ. ವಿದ್ಯಾ ಸಂಸ್ಥೆಗಳು ಚಿತ್ತಾಕರ್ಷಕ ಆಗಬೇಕು ವಿನಃ ವಿತ್ತಾಕರ್ಷಕ ಆಗಬಾರದು ಎಂದರು. ಉತ್ತಮ ಸಾಹಿತ್ಯ ಸಿಗದೇ ಇರುವುದು ಇಂದಿನ ಮಕ್ಕಳ ಮನುಸನ್ನು ಕಲುಷಿತಗೊಳಿಸಿದೆ, ಕನ್ನಡ ಮಾಧ್ಯಮದಲ್ಲಿ ಕಲಿತರೆ ಪ್ರಯೋಜನವಿಲ್ಲ ಎನ್ನುವ ಭ್ರಮೆಯಿಂದ ವಿದ್ಯಾರ್ಥಿಗಳ ಪೋಷಕರು ಹೊರ ಬರಬೇಕಿದೆ ಎಂದರು.
ಜಾವೆಲಿನ್ ಎಸೆತ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಪ್ರತಿಭೆ ಸಿದ್ಧಕಟ್ಟೆ ಗುಣಶ್ರೀ ವಿದ್ಯಾಸಂಸ್ಥೆ ವಿದ್ಯಾರ್ಥಿನಿ ರಮ್ಯಶ್ರೀ ಜೈನ್ ಅವರನ್ನು ಸನ್ಮಾನಿಸಲಾಯಿತು.
ಸರ್ಕಾರಿ ಪ್ರೌಢಶಾಲೆಗಳಲ್ಲಿ ಕಲಿತು ಈ ಬಾರಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಮಾಣಿಲ ಸರ್ಕಾರಿ ಪ್ರೌಢಶಾಲೆಯ ಅನಿರುದ್ಧ, ಕೊಯ್ಲ ಸರ್ಕಾರಿ ಪ್ರೌಢಶಾಲೆಯ ಲತಾ ಎಚ್, ಶಂಭೂರು ಸರ್ಕಾರಿ ಪ್ರೌಢಶಾಲೆಯ ಪ್ರತೀಕ್ಷಾ ಎಚ್. ಎಸ್. ಅವರಿಗೆ ಲ್ಯಾಪ್ ಟಾಪ್ ವಿತರಿಸಲಾಯಿತು.
ಅಧ್ಯಕ್ಷತೆಯನ್ನು ವಹಿಸಿದ್ದ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ ಬೂಡ ಅಧ್ಯಕ್ಷ ದೇವದಾಸ ಶೆಟ್ಟಿ ಶುಭ ಹಾರೈಸಿದರು. ವೇದಿಕೆಯಲ್ಲಿ ಡಿವೈಎಸ್ಪಿ ವೆಲಂಟೈನ್ ಡಿಸೋಜ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಗಾಯತ್ರಿ ಕಂಬಳಿ, ಸುಧಾ ಜೋಷಿ, ಉಪ ನೋಂದಾಧಿಕಾರಿ ಕವಿತಾ ಉಪಸ್ಥಿತರಿದ್ದರು. ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಸ್ವಾಗತಿಸಿದರು. ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ವಂದಿಸಿದರು. ಕಲಾವಿದ ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು.