ಬಂಟ್ವಾಳ: ಮೆಲ್ಕಾರ್ ಬಳಿಯ ಗುಡ್ಡೆಅಂಗಡಿಯಲ್ಲಿ ಯುವಕನನ್ನು ಮಾರಕಾಯುಧದಿಂದ ಇರಿದು ಕೊಲೆ ಮಾಡಿದ ಆರೋಪಿಯೊಬ್ಬನಿಗೆ ಬಂಟ್ವಾಳ ಪೊಲೀಸರು ಫೈರಿಂಗ್ ನಡೆಸಿದ ಘಟನೆ ಶನಿವಾರ ಮುಂಜಾನೆ ಪುತ್ತೂರಿನ ಗುಂಡ್ಯ ಬಳಿ ನಡೆದಿದೆ. ಪೊಲೀಸರು ಓರ್ವನನ್ನು ಬಂಧಿಸಿದ್ದು, ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.
ನಂದಾವರ ನಿವಾಸಿ ಖಲೀಲ್ ಗಾಯಗೊಂಡವನು. ಘಟನೆಯಲ್ಲಿ ಆತನ ಕಾಲಿಗೆ ಗಾಯವಾಗಿದ್ದು, ಆತನನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಲೆ ಆರೋಪಿ ಖಲೀಲ್ ಮತ್ತು ಇಬ್ಬರು ಆರೋಪಿಗಳು ಬೆಂಗಳೂರು ಕಡೆಗೆ ಹೋಗುತ್ತಿದ್ದ ಮಾಹಿತಿ ಆಧರಿಸಿ ಬಂಟ್ವಾಳದಿಂದ ಬೆನ್ನಟ್ಟಿ ಹೋದ ಪೊಲೀಸರು ಗುಂಡ್ಯ ಅಡ್ಡಗಟ್ಟಿದ್ದರು. ಆದರೆ ಈ ವೇಳೆ ಆರೋಪಿ ಖಲೀಲ್ ಪೊಲೀಸರ ಮೇಲೆ ತಲವಾರು ದಾಳಿ ನಡೆಸಿದ್ದ. ಅ ಸಂದರ್ಭದಲ್ಲಿ ಬಂಟ್ವಾಳ ನಗರ ಠಾಣಾ ಎಸ್.ಐ. ಅವಿನಾಶ್ ಗುಂಡಿನ ದಾಳಿ ನಡೆಸಿದ್ದು, ಖಲೀಲ್ ಕಾಲಿಗೆ ಗುಂಡು ಹೊಕ್ಕಿದೆ.
ಬಂಟ್ವಾಳದ ಮೆಲ್ಕಾರ್ ಬಳಿ ಶುಕ್ರವಾರ ಸಂಜೆ ಉಮರ್ ಫಾರೂಕ್ ಎಂಬ ಯುವಕ ಬೈಕ್ ನಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿದ್ದ ದುಷ್ಕರ್ಮಿಗಳು ಮಾರಾಕಾಯುಧಗಳಿಂದ ದಾಳಿ ನಡೆಸಿ ಕೊಲೆ ಮಾಡಿದ್ದರು.
ಬಂಟ್ವಾಳ: ಮಾರಾಕಾಯುಧಗಳಿಂದ ಯುವಕನನ್ನು ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು
ಕೊಲೆ ಆರೋಪಿಗಳ ಪತ್ತೆಗೆ ಎಸ್.ಪಿ. ಲಕ್ಮೀಪ್ರಸಾದ್ ವಿಶೇಷ ತಂಡ ರಚನೆ ಮಾಡಿದ್ದರು. ಅ ಹಿನ್ನಲೆಯಲ್ಲಿ ಎಸ್.ಐ.ಅವಿನಾಶ್ ಹಾಗೂ ಬಂಟ್ವಾಳ ಗ್ರಾಮಾಂತರ ಎಸ್.ಐ ಪ್ರಸನ್ನ ಆರೋಪಿಗಳ ಪತ್ತೆಗೆ ಮುಂದಾದ ವೇಳೆ ಆರೋಪಿಗಳು ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಎಸ್.ಐ ಪ್ರಸನ್ನ ಅವರಿಗೂ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದೆ.
ಅ ವೇಳೆ ಆರೋಪಿ ಹಫೀಜ್ ಹಾಗೂ ಇನ್ನೊಬ್ಬ ಆರೋಪಿ ಅಲ್ಲಿಂದ ತಪ್ಪಿಸಿಕೊಂಡಿದ್ದು, ಹತ್ತಿರದ ಗುಡ್ಡೆಗೆ ಓಡಿ ಹೋಗಿದ್ದಾರೆ. ಉಪ್ಪಿನಂಗಡಿ ಎಸ್.ಐ.ಈರಯ್ಯ ಇವರ ಬಂಧನಕ್ಕೆ ಮುಂದಾಗಿದ್ದು, ಶೋಧ ಕಾರ್ಯ ಆರಂಭಿಸಿದ್ದಾರೆ.
ರೌಡಿ ಶೀಟರ್ ಖಲೀಲ್
ಪ್ರಕರಣದ ಆರೋಪಿ ಖಲೀಲ್ ಈ ಹಿಂದೆಯೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಕೋಮು ಗಲಭೆ ಸಹಿತ ಆನೇಕ ಪ್ರಕರಣಗಳ ಪ್ರಮುಖ ಆರೋಪಿಯಾಗಿದ್ದು , ಕಲ್ಲಡ್ಕದಲ್ಲಿ ಉಂಟಾಗುತ್ತಿದ್ದ ಗಲಾಟೆಯಲ್ಲಿ ಈತನ ಹೆಸರಿತ್ತು.
ಈತನ ಮೇಲೆ ಬಂಟ್ವಾಳ ನಗರ ಠಾಣೆಯಲ್ಲಿ ರೌಡಿಶೀಟ್ ತೆರೆಯಲಾಗಿದ್ದು ಇತ್ತೀಚೆಗೆ ನಡೆದ ರತ್ನಾಕರ ಶೆಟ್ಟಿಯವರ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಈತನ ಗಡಿಪಾರು ನಡೆದಿತ್ತು.