ಬಂಟ್ವಾಳ: ಪುರಸಭೆ ಬಂಟ್ವಾಳ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಬಂಟ್ವಾಳ ಇದರ ಆಶ್ರಯದಲ್ಲಿ ಹ್ಯುಮ್ಯಾನಿಟಿ ಕ್ಲಬ್ ಬಂಟ್ವಾಳ ಇದರ ಸಹಯೋಗದೊಂದಿಗೆ ಕೋವಿಡ್ ಪರೀಕ್ಷೆ ಹಾಗೂ ಆರೋಗ್ಯ ತಪಾಸಣ ಶಿಬಿರ ಬಿ.ಸಿ.ರೋಡಿನ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಯಲ್ಲಿ ಮಂಗಳವಾರ ನಡೆಯಿತು.
ಪುರಸಭಾ ಸದಸ್ಯ ಗೋವಿಂದ ಪ್ರಭು ಶಿಬಿರ ಉದ್ಘಾಟಿಸಿದರು. ಅವರು ಮಾತನಾಡಿ ಕೊರೋನಾ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಅಂತಹ ಕಾರ್ಯವನ್ನು ಹ್ಯುಮ್ಯಾನಿಟಿ ಕ್ಲಬ್ ಮಾಡುತ್ತಿದೆ. ಆತಂಕ ಬಿಟ್ಟು ಸ್ವಯಂ ಪ್ರೇರಣೆಯಿಂದ ಕೋವಿಡ್ ತಪಾಸಣೆ ಮಾಡಿಸಿ ನಿರಾಳರಾದಗ ನಮ್ಮ ಆರೋಗ್ಯವೂ ಉತ್ತಮವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ನ.ಪ್ರಾ. ಆ. ಕೇಂದ್ರದ ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಸದಾಶಿವ ಬಂಗೇರ ಮಾತನಾಡಿ ಜನರು ಭಯ ಮುಕ್ತರಾಗಿ ಕೋವಿಡ್ ತಪಾಸಣೆ ನಡೆಸಲು ಮುಂದಾಗಬೇಕು. ಭಯವೇ ನಮಗೆ ರೋಗ ಆಹ್ವಾನಕ್ಕೆ ದಾರಿ ಮಾಡಿ ಕೊಡುತ್ತದೆ ಎಂದರು.
ಎ.ಜೆ. ಆಸ್ಪತ್ರೆಯ ತಜ್ಞ ವೈದ್ಯ ಡಾ. ಜಮೀಲ್ ಉಮ್ಮರ್ ಕೋವಿಡ್ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದರು.
ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಶ್ವಿನಿ ಉಪಸ್ಥಿತರಿದ್ದರು. ಹ್ಯುಮ್ಯಾನಿಟಿ ಟ್ರಸ್ಟಿ ಪ್ರಶಾಂತ್ ಫ್ರಾಂಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕ್ಲಬ್ ಸದಸ್ಯ ಸಂದೀಪ್ ಸಾಲ್ಯಾನ್ ಕಾರ್ಯಕ್ರಮ ನಿರ್ವಹಿಸಿದರು. ನ.ಪ್ರಾ.ಅ. ಕೇಂದ್ರದ ಆರೋಗ್ಯ ಸಹಾಯಕಿಯರು, ಆಶಾಕಾರ್ಯಕರ್ತೆಯರು, ಹ್ಯುಮ್ಯಾನಿಟಿ ಕ್ಲಬ್ ಸದಸ್ಯರು ಸಹಕರಿಸಿದರು. ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆದ ಶಿಬಿರದಲ್ಲಿ 82 ಮಂದಿ ಕೋವಿಡ್ ಪರೀಕ್ಷೆ ನಡೆಸಿದರು.