ಬಂಟ್ವಾಳ: ವೇತನ ಸಹಿತ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡದೆ ಕಾರ್ಮಿಕರನ್ನು ಸತಾಯಿಸುತ್ತಿರುವ ಬಂಟ್ವಾಳ ತಾಲೂಕಿನ ಲೊರೆಟ್ಟೊ ಪದವಿನಲ್ಲಿರುವ ಕ್ಯಾಶ್ಯೂ ಕಂಪನಿ ಪ್ರೈ. ಲಿ. ನ ವಿರುದ್ದ ಕಾರ್ಮಿಕರು ಪೊಲೀಸರಿಗೆ ದೂರು ನೀಡಿ ಬಿ.ಸಿ.ರೋಡಿನ ನಗರ ಪೊಲೀಸ್ ಠಾಣೆಯ ಮುಂಭಾಗ ಪ್ರತಿಭಟನೆ ನಡೆಸಿದರು.
250 ಕ್ಕೂ ಅಧಿಕ ಮಂದಿ ಮಹಿಳಾ ಕಾರ್ಮಿಕರು ಠಾಣೆಯ ಮುಂದೆ ಜಮಾಯಿಸಿ ಕ್ಯಾಶ್ಯೂ ಕಂಪೆನಿಯ ಆಡಳಿತ ಮಂಡಳಿಯ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕ್ಯಾಶ್ಯು ಕಂಪೆನಿಯಲ್ಲಿ ಮಹಿಳೆಯರು ಪುರುಷರು ಸೇರಿ ಮುನ್ನೂರಕ್ಕಿಂತಲೂ ಅಧಿಕ ಮಂದಿ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ 2018ರಿಂದ ಇಲ್ಲಿನ ಆಡಳಿತ ಮಂಡಳಿ ಸರಿಯಾಗಿ ವೇತನ ಪಾವತಿಸದೆ, ನ್ಯಾಯಯುತ ವಾಗಿ ಸಿಗಬೇಕಾದ ಸೌಲಬ್ಯಗಳನ್ನು ನೀಡದೆ ಸತಾಯಿಸುತ್ತಿದೆ. ಇದೀಗ ಕಾರ್ಮಿಕರನ್ನು ವಂಚಿಸುವ ಉದ್ದೇಶದಿಂದ ಯಂತ್ರೋಪಕರಣಗಳನ್ನು ಬೇರೆಡೆ ವರ್ಗಾಯಿಸುತ್ತುದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ಬೆದರಿಕೆ ಒಡ್ಡಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ.
ಆಡಳಿತ ಮಂಡಳಿಯ ಈ ಕಾರ್ಮಿಕ ವಿರೋಧಿ ಧೋರಣೆಯಿಂದಾಗಿ 300 ಮಂದಿಯ ಜೀವನ ಬೀದಿಗೆ ಬಂದಿದೆ ಎಂದು ಮಾಧ್ಯಮದ ಮುಂದೆ ಅಳಲು ತೋಡಿಕೊಂಡಿದ್ದಾರೆ.