ಬಂಟ್ವಾಳ: ಜೇಸಿಐ ಜೋಡುಮಾರ್ಗ ನೇತ್ರಾವತಿ, ಜೇಸಿರೆಟ್ ವಿಭಾಗ ಮತ್ತು ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯ ಇವುಗಳ ಜಂಟಿ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ವಿಜೃಂಭಣೆಯಿಂದ ವಳಚ್ಚಿಲ್ನ ಶ್ರೀನಿವಾಸ ತಾಂತ್ರಿಕ ಕಾಲೇಜಿನ ಆವರಣದಲ್ಲಿ ಆಚರಿಸಲಾಯಿತು. ಸೈಂಟ್ ಆಗ್ನೆಸ್ ಕಾಲೇಜಿನ ಪ್ರೊಫೆಸರ್ ಡಾ| ಮಾಲಿನಿ ಹೆಬ್ಬಾರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಬಿ.ಸಿ.ರೋಡಿನ ಪ್ರಸಿದ್ಧ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ| ಭಾರತಿ ಎಸ್. ಶೆಟ್ಟಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಡಾ| ಥಾಮಸ್ ಪಿಂಟೋ, ಕಾಲೇಜಿನ ಮಹಿಳಾ ವಿಭಾಗದ ಸಂಯೋಜಕಿ ಪ್ರೊ| ವೀಣಾ ಎಸ್. ರೈ ಉಪಸ್ಥಿತರಿದ್ದರು. ಜೇಸಿರೆಟ್ ವಿಭಾಗದ ಅಧ್ಯಕ್ಷೆಯಾದ ಪ್ರೊ| ಅಮಿತಾ ಹರ್ಷರಾಜ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಕಾನೂನು ಹಾಗೂ ಮಹಿಳಾ ಹಕ್ಕುಗಳ ಜಾಗೃತಿ ವಿಷಯದಲ್ಲಿ ಆಯೋಜಿಸಿದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳು ಬಹುಮಾನ ವಿತರಿಸಿದರು. ಮುಖ್ಯ ಅತಿಥಿಗಳಾದ ಡಾ| ಮಾಲಿನಿ ಹೆಬ್ಬಾರ್ ಅವರು ವುಮೆನ್ ಮತ್ತು ಸ್ಟಿರಿಯೋಟೈಪ್ಸ್ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು. ಜೇಸಿಐ ಭಾರತದ ಮಹಿಳಾ ದಿನಾಚರಣೆಯ ಪ್ರಯಾಸ್ ಕಾರ್ಯಕ್ರಮದಡಿ ಡಾ| ಭಾರತಿ ಶೆಟ್ಟಿಯವರು ಮಹಿಳೆಯರು ಋತುಚಕ್ರದ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಜಾಗೃತಿ ಮತ್ತು ನೈರ್ಮಲ್ಯದ ಬಗ್ಗೆ ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು. ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಎಂ.ಬಿ.ಎ., ಎಂ.ಸಿ.ಎ. ವಿಭಾಗದ ಸುಮಾರು ೨೫೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯರೊಂದಿಗೆ ಸಮಾಲೋಚಿಸಿ ತಮ್ಮ ಸಂದೇಹಗಳನ್ನು ನಿವಾರಿಸಿಕೊಂಡರು. ಪ್ರೊ| ಮರಿನಾ ಚಾಂಡಿ ಸ್ವಾಗತಿಸಿದರು ಪ್ರೊ| ದೀಪ್ತಿ ಶೆಟ್ಟಿ ವಂದಿಸಿದರು.
ಜೇಸಿಐ ಜೋಡುಮಾರ್ಗದಿಂದ ವಿಶ್ವ ಮಹಿಳಾ ದಿನಾಚರಣೆ
