ಬಂಟ್ವಾಳ: ಕೊರೊನ ಮಹಾಮಾರಿಯಿಂದ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಸರಕಾರ ಕಲಾವಿದರಿಗೆ ಭದ್ರತೆ ಒದಗಿಸಬೇಕು. ಈ ನಿಟ್ಟಿನಲ್ಲಿ ಕಲಾವಿದರ ಸಂಘಟನೆಗಳು ಒಗ್ಗಟ್ಟಾಗಬೇಕು ಎಂದು ತುಳು ಅಕಾಡೆಮಿ ಮಾಜಿ ಸದಸ್ಯ, ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಅವರು ಹೇಳಿದರು.
ಅವರು ಶುಕ್ರವಾರ ಬಿ.ಸಿ.ರೋಡ್ ಸ್ಪರ್ಶ ಕಲಾಮಂದಿರದಲ್ಲಿ ನಡೆದ ತುಳು ನಾಟಕ ಕಲಾವಿದರ ಒಕ್ಕೂಟದ ಬಂಟ್ವಾಳ ತಾಲೂಕು ಘಟಕ ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪ್ರಸ್ತುತ ಸನ್ನಿವೇಶ ದಲ್ಲಿ ಕಲಾವಿದರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಅಸಹಾಯಕ ಸ್ಥಿತಿಯಲ್ಲಿದ್ದು, ಭವಿಷ್ಯದಲ್ಲಿ ಕಲಾವಿದರ ಬದುಕು ಹಸನಾಗಲು ಉಪವೃತ್ತಿಯನ್ನು ಆಯ್ದು ಕೊಳ್ಳುವಂತೆ ಸಲಹೆ ನೀಡಿದ ಅವರು, ಸಂಘಟನೆಗಳು ಕಲಾವಿದರ ಕ್ಷೇಮಾಭಿವೃದ್ಧಿ ಗಾಗಿ ನಿಧಿಯನ್ನು ಸ್ಥಾಪಿಸುವ ಮೂಲಕ ಕಲಾವಿದರ ಸಂಕಷ್ಟಕ್ಕೆ ನೆರವಾಗಬೇಕು ಎಂದರು.
ಉದ್ಯಮಿ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ ಅವರು ನೂತನ ಘಟಕವನ್ನು ಉದ್ಘಾಟಿಸಿ, ಶುಭ ಹಾರೈಸಿದರು.
ನ್ಯಾಯವಾದಿ ಅಶ್ವನಿ ಕುಮಾರ್ ರೈ ಅವರು ಮಾತನಾಡಿ,ಸರಕಾರದ ಸವಲತ್ತು ಪಡೆಯಲು ಸಂಘಟನೆ ಅಗತ್ಯ,ಈ ನಿಟ್ಟಿನಲ್ಲಿ ಕಲಾವಿದರ ಒಕ್ಕೂಟದ ಕಾರ್ಯ ಅಭಿನಂದನೀಯ ಎಂದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಶಿವರಾಮ ಜೋಗಿ ಶುಭ ಹಾರೈಸಿದರು. ಒಕ್ಕೂಟದ ಜಿಲ್ಲಾಧ್ಯಕ್ಷ ಲ.ಡಿ.ಕಿಶೋರ್ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ,
ಸರಕಾರ ಕೊರೊನಾ ನಿಯಮಾವಳಿಯನ್ನು ಸಡಿಲಿಸಿ ನಾಟಕ ಪ್ರದರ್ಶನ ಕ್ಕೆ ಅವಕಾಶ ಕಲ್ಪಿಸಿಕೊಟ್ಟು ಕಲಾವಿದರ ಬದುಕಿಗೆ ಸಹಕಾರಿಯಾಗಬೇಕು ಎಂದರು.
ಒಕ್ಕೂಟದ ಪದಾಧಿಕಾರಿಗಳಾದ ಮೋಹನ್ ಕೊಪ್ಪಳ, ಶೋಭಾ ಶೆಟ್ಟಿ, ಮಧು ಬಂಗೇರ ಕಲ್ಲಡ್ಕ,ಪ್ರದೀಪ್ ಆಳ್ವ ವೇದಿಕೆಯಲ್ಲಿದ್ದರು. ಬಂಟ್ವಾಳ ಘಟಕ ಸಂಚಾಲಕ ಸುಭಾಷ್ ಜೈನ್ ಸ್ವಾಗತಿಸಿದರು. ಮಂಜು ವಿಟ್ಲ ಪ್ರಸ್ತಾವಿಸಿದರು.ನಾರಾಯಣ ಪೆರ್ನೆ ವಂದಿಸಿದರು. ಕಲಾವಿದ ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.