ಬಂಟ್ವಾಳ: ಖಾಸಗಿ ವಾಹನಗಳ ಪ್ರವೇಶವಿಲ್ಲ ಎನ್ನುವ ಸೂಚನಾ ಫಲಕ ಪ್ರವೇಶ ದ್ವಾರದ ಬಳಿಯೇ ಇದ್ದರೂ ಕೂಡ ಬಿ.ಸಿ.ರೋಡಿನ ಮಿನಿವಿಧಾನ ಸೌಧದ ಆವರಣ ಖಾಸಗಿ ವಾಹನಗಳ ಅಡ್ಡೆಯಾಗಿ ಮಾರ್ಪಟ್ಟಿದೆ. ಮಿನಿ ವಿಧಾನ ಸೌಧದ ಆವರಣ ಬಿ.ಸಿ.ರೋಡಿನ ಮಿನಿ ಪಾರ್ಕಿಂಗ್ ಏರಿಯಾವಾಗಿ ಮಾರ್ಪಟ್ಟಿದ್ದು ಖಾಸಗಿ ವಾಹನಗಳು ತುಂಬಿ ಹೋಗಿದೆ. ಖಾಸಗಿಕಾರು, ಬೈಕ್ ಗಳು ಮಾತ್ರವಲ್ಲದೆ ಆಟೋ ರಿಕ್ಷಾಗಳು ಕೂಡ ಮಿನಿವಿಧಾನ ಸೌಧದ ಆವರಣದಲ್ಲಿ ನಿಲ್ಲಲಾರಂಭಿಸಿದೆ.
ಮಿನಿ ವಿಧಾನ ಸೌಧದ ಆವರಣದಲ್ಲಿ ವಾಹನಗಳ ಅಡ್ಡಾದಿಡ್ಡಿ ಪಾರ್ಕಿಂನಿಂದಾಗಿ ಸ್ವತಃ ತಹಶೀಲ್ದಾರ್ ಅವರ ಜೀಪನ್ನು ಆವರಣದ ಒಳ ತರಲು ಪರದಾಡ ಬೇಕಾಯಿತು. ಬೇಕಾಬಿಟ್ಟಿ ಪಾರ್ಕಿಂಗ್ ಮಾಡಿದವರನ್ನು ತಹಶೀಲ್ದಾರ್ ರಶ್ಮಿ ಎಸ್.ಆರ್. ತರಾಟೆಗೆ ತೆಗದುಕೊಂಡರಲ್ಲದೆ ವಾಹನಗಳನ್ನು ತೆರವುಗೊಳಿಸಲು ಸ್ಥಳದಲ್ಲಿದ್ದ ಪೊಲೀಸರಿಗೆ ಸೂಚಿಸಿದರು. ಬಿ.ಸಿ.ರೋಡಿನಲ್ಲಿ ಪಾರ್ಕಿಂಗ್ ಸಮಸ್ಯೆ ಹಲವು ವರ್ಷಗಳ ಸಮಸ್ಯೆಯಾಗಿದ್ದು ಇತ್ತೀಚಿನ ದಿನಗಳಲ್ಲಿ ಮಿನಿವಿಧಾನ ಸೌಧದ ಆವರಣ ಸ್ಥಳ ಪಾರ್ಕಿಂಗ್ ಸ್ಥಳವಾಗಿ ಗುರುತಿಸಿ ಕೊಳ್ಳುತ್ತಿದೆ.