ಬಂಟ್ವಾಳ: ಎಡನೀರು ಶ್ರೀಗಳು ಕಲೆಗೆ, ಸಾಹಿತ್ಯಕ್ಕೆಅಪಾರವಾದ ಪ್ರೋತ್ಸಾಹ ನೀಡಿದವರು. ಆ ಮೂಲಕ ಸಾಂಸ್ಕೃತಿಕ ಲೋಕಕ್ಕೆ ವಿಶಿಷ್ಟವಾದ ಪರಂಪರೆಯನ್ನು ಹಾಕಿಕೊಟ್ಟವರು .ಅವರ ಆದರ್ಶ ಕಲಾವಿದರಿಗೆಲ್ಲಾ ಮಾರ್ಗದರ್ಶನವಾಗಲಿ ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದ ಸಭಾಂಗಣದಲ್ಲಿ, ಇತ್ತೀಚೆಗೆ ನಿಧನರಾದ ಎಡನೀರು ಮಠದ ಶ್ರೀಕೇಶವಾನಂದ ಭಾರತಿ ಶ್ರೀಗಳು ಹಾಗೂ ಅಳಿಕೆಯ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಯ ಅಧ್ಯಕ್ಷ ಯು. ಗಂಗಾಧರ ಭಟ್ ಅವರ ಸಂತಾಪ ಸಭೆಯಲ್ಲಿ ದೀಪ ಪ್ರಜ್ವಲಿಸಿ, ಪುಷ್ಪ ಸಮರ್ಪಿಸಿ ಬಳಿಕ ನುಡಿನಮನ ಸಲ್ಲಿಸಿದರು.
ಮಠದ ಸೇವಾಕಾರ್ಯದಲ್ಲಿ ನಾವೆಲ್ಲಾ ತೊಡಗಿಸಿಕೊಳ್ಳಬೇಕು ಎಂದ ಮಾಣಿಲ ಶ್ರೀಗಳು ಎಡನೀರು ಸ್ವಾಮೀಜಿಯ ಗುಣಗಾನ ಮಾಡಿದರು. ಅಳಿಕೆ ವಿದ್ಯಾಸಂಸ್ಥೆ ತಾಲೂಕಿಗೆ ಕೀರ್ತಿ ತಂದಿರುವುದು ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲೇ ಗುರುತಿಸಿಕೊಂಡಿರುವ ವಿದ್ಯಾಸಂಸ್ಥೆಯಾಗಿದೆ. . ಗಂಗಾಧರ ಭಟ್ ನಮ್ಮೆಲ್ಲರ ಮೇಲಿಟ್ಟ ಪ್ರೀತಿ ಅಗಾಧವಾದುದು ಎಂದರು.
ಮಾಜಿ ಸಚಿವ ಬಿ.ರಮಾನಾಥ ರೈ ನುಡಿ ನಮನ ಸಲ್ಲಿಸಿದರು.
ಅಳಿಕೆ ವಿದ್ಯಾಸಂಸ್ಥೆಯ ಪರವಾಗಿ ಸಂಸ್ಥೆಯ ಕಾರ್ಯದರ್ಶಿ ಚಂದ್ರಶೇಖರ ಭಟ್ ಮಾತನಾಡಿದರು.
ವೇದಿಕೆಯಲ್ಲಿ ಶಂಕರ ಪ್ರತಿಷ್ಠಾನದ ಅಧ್ಯಕ್ಷ ಕೈಯ್ಯೂರು ನಾರಯಣ ಭಟ್, ಯಕ್ಷಗಾನ ಬಯಲಾಟ ಸಪ್ತಾಹ ಸಮಿತಿ ಅಧ್ಯಕ್ಷ ಎ.ಸಿ.ಭಂಡಾರಿ, ಭೀಮಭಟ್ಟ ಅಭಿಮಾನಿ ಬಳಗದ ಅಧ್ಯಕ್ಷ ಸುದರ್ಶನ ಜೈನ್, ಬಂಟ್ವಾಳ ಕಸಾಪ ಅಧ್ಯಕ್ಷ ಮೋಹನರಾವ್ ಉಪಸ್ಥಿತರಿದ್ದರು. ಸಾರ್ವಜನಿಕರ ಪರವಾಗಿ ನಿವೃತ್ತ ಪ್ರಾಧ್ಯಪಕ ಪ್ರೊ. ರಾಜಮಣಿ ರಾಮಕುಂಜ, ಹಿರಿಯ ಯಕ್ಷಗಾನ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ, ಕಸಾಪ ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ ನುಡಿನಮನ ಸಲ್ಲಿಸಿದರು.
ಶಂಕರ ಪ್ರತಿಷ್ಠಾನ ಕೆಯ್ಯೂರು, ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ, ಭೀಮಭಟ್ಟ ಅಭಿಮಾನಿ ಬಳಗ, ಯಕ್ಷಗಾನ ಬಯಲಾಟ ಸಪ್ತಾಹ ಸಮಿತಿ ಜಂಟಿ ಆಶ್ರಯದಲ್ಲಿ ಶ್ರದ್ದಾಂಜಲಿ ಸಭೆ ಸಂಘಟಿಸಲಾಗಿತ್ತು.