ಬಂಟ್ವಾಳ: ಜಾಗತಿಕ ಮಹಾಮಾರಿ ಕೊರೋನಾ ಸಾಮುದಾಯಿಕ ಹರಡುವಿಕೆಯ ಮೊದಲ ಹಂತ ಈಗಾಗಲೇ ತಲುಪಿದೆ. ಇನ್ನು ಮುಂದೆ ಕೊರೋನಾ ರೋಗವು ಯಾರಿಗೆ ಎಲ್ಲಿಂದ ಹೇಗೆ ಬಂದಿದೆ ಎಂದು ತಿಳಿದುಕೊಳ್ಳುಲು ಸಾಧ್ಯವೇ ಇಲ್ಲದಷ್ಟು ಪರಿಸ್ಥಿತಿ ಬಿಗಡಾಯಿಸಿದೆ. ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ತನ್ನ ಎಲ್ಲಾ ಉನ್ನತ ಮಟ್ಟದ ಪ್ರಯತ್ನಗಳನ್ನು ಮಾಡುತ್ತಿದ್ದರೂ ಯಾವುದೂ ಪರಿಣಾಮಕಾರಿ ಬೆಳವಣಿಗೆ ಕಾಣುತ್ತಿಲ್ಲ. ಆಸ್ಪತ್ರೆಗಳು ಬೆಡ್, ವೆಂಟಿಲೇಟರ್, ಪಿಪಿಟಿ ಕಿಟ್ಗಳ ಕೊರತೆಯಿಂದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಕೊಡಲು ಸಾಧ್ಯವಾಗದ ಸ್ಥಿತಿಯಲ್ಲಿದೆ. ಇಂತಹ ಕಠಿಣ ಕಷ್ಟದ ಸಮಯದಲ್ಲಿ ನಮ್ಮ ಸೇವೆ ಮಾಡಬೇಕಾದ ಪೊಲೀಸರು, ದಾದಿಯರು ಹಾಗೂ ಅನೇಕ ವೈದ್ಯರುಗಳು ಕೂಡ ಕೊರೋನಾ ಮಾಹಾಮಾರಿಯ ಹೊಡೆತಕ್ಕೆ ಸಿಲುಕಿರುವುದು ದೊಡ್ಡ ಆಘಾತಕಾರಿ ಬೆಳವಣಿಗೆಯಾಗಿದೆ ಆದ್ದರಿಂದ ಸರಕಾರದ ಮುಂದೆ ಇನ್ನೊಂದು ಸಲ ಲಾಕ್ಡೌನ್ ಮಾಡುವ ಯೋಚನೆ ಇದ್ದರೆ ಅದನ್ನು ಇನ್ನೂ ಪರಿಣಾಮಕಾರಿಯಾಗಿ ಮಾಡಬೇಕಾಗಿದೆ ಎಂದು ಭಾರತೀಯ ಮಾನವ ಹಕ್ಕುಗಳ ಸಂರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಇಕ್ಬಾಲ್ ಹೇಳಿದ್ದಾರೆ.
ಸರಕಾರ ಬೇರೆ ಬೇರೆ ಇಲಾಖೆಗಳಿಗೆ ಅಭಿವೃದ್ಧಿ ಹೆಸರಲ್ಲಿ ಬಿಡುಗಡೆ ಮಾಡಿರುವ ನಿಧಿಯನ್ನು ರದ್ದುಪಡಿಸಿ ಈ ಸಮಯದಲ್ಲಿ ಆರೋಗ್ಯ ಇಲಾಖೆಗೆ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಬೇಕಿದೆ. ಆ ಮೂಲಕ ರಾಜ್ಯದ ಪ್ರತಿಯೊಬ್ಬ ಪ್ರಜೆಗಳ ಕೊರೋನಾ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿ ಪಾಸಿಟಿವ್ ಬಂದವರನ್ನು ಸಾಮಾನ್ಯ ನಾಗರಿಕರಿಂದ ಪ್ರತ್ಯೇಕಿಸಿ ನಂತರ ಲಾಕ್ ಡೌನ್ ಮಾಡಿದರೆ ಒಂದು ಹಂತದ ವರೆಗೆ ಕೊರೋನಾವನ್ನು ತಡೆಗಟ್ಟಬಹುದು. ಇಲ್ಲದಿದ್ದರೆ ಈ ಹಿಂದೆ ಮಾಡಿರುವ ಲಾಕ್ಡೌನ್ ನಂತೆ ಸರಕಾರದ ಮುಂದಿನ ಕ್ರಮವೂ ವಿಫಲವಾಗಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.