ಬಂಟ್ವಾಳ: ರಾಜ್ಯ ವಿಧಾನ ಪರಿಷತ್ತಿಗೆ ಬಿಜೆಪಿಯಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂ ಸೇವಕ, ಬಿಜೆಪಿಯ ನಿಷ್ಠಾವಂತ ನಾಯಕ ಡಾ| ಅಣ್ಣಯ್ಯ ಕುಲಾಲ್ ಅವರನ್ನು ನಾಮನಿದೇರ್ಶನಗೊಳಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.
ವೃತ್ತಿಯಲ್ಲಿ ವೈದ್ಯನಾಗಿ, ಕುಲಾಲ ಸಮುದಾಯದ ರಾಷ್ಟ್ರೀಯ ಮಟ್ಟದ ನಾಯಕನಾಗಿ, ಪರಿಸರ ಹೋರಾಟಗಾರನಾಗಿ, ನಾಡು ನುಡಿಯ ಸೇವೆಯೊಂದಿಗೆ ಕನ್ನಡ, ತುಳು ಸಾಹಿತ್ಯ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡ ಡಾ. ಅಣ್ಣಯ್ಯ ಕುಲಾಲ್ ಅವರು ಪಕ್ಷದಲ್ಲಿ ಸಲ್ಲಿಸಿದ ಸುದಿರ್ಘ ಸೇವೆಗೆ ಈ ಮೂಲಕ ಸೂಕ್ತ ಸ್ಥಾನಮಾನ, ನ್ಯಾಯ ಒದಗಿಸಲು ಇದು ಸಕಾಲ. ಇದು ಕುಲಾಲ ಸಮುದಾಯದ ಬೇಡಿಕೆ ಮಾತ್ರವಾಗಿರದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಬಿಜೆಪಿಯ ಹಿರಿಯ ನಾಯಕರು ಹಾಗೂ ಕಾರ್ಯಕರ್ತರ ಆಗ್ರಹವೂ ಆಗಿದೆ.
ಬಿಜೆಪಿ ಪಕ್ಷದಲ್ಲಿ ಹಲವು ವರ್ಷದಿಂದ ಗುರುತಿಸಿಕೊಂಡು ಪಕ್ಷ ನಿಷ್ಠರಾಗಿರುವಂತಹ ಡಾ| ಅಣ್ಣಯ್ಯ ಕುಲಾಲ್ ಅವರಿಗೆ ವಿಧಾನ ಪರಿಷತ್ ಸ್ಥಾನ ನೀಡಬೇಕು ಎನ್ನುವ ಬೇಡಿಕೆ ಇಂದು ನಿನ್ನೆಯದಲ್ಲ. ಆದರೆ ಈವರೆಗೂ ಈ ಬೇಡಿಕೆ. ಬೇಡಿಕೆಯಾಗಿಯೇ ಉಳಿದಿದೆ. ಇತ್ತೀಚೀನ ರಾಜಕೀಯ ಬೆಳವಣಿಗೆಯಲ್ಲಿ ಪಕ್ಷದ ಹಿರಿಯ ನಾಯಕರಿಗೆ, ಸಾಮಾಜಿಕ ನ್ಯಾಯ ವಂಚಿತ ಜಾತಿ ಸಮುದಾಯಗಳಿಗೂ ಬಿಜೆಪಿ ಪಕ್ಷ ಪ್ರಾಧನ್ಯತೆ ನೀಡುತ್ತಿರುವ ಹಿನ್ನಲೆಯಲ್ಲಿ ಅಣ್ಣಯ್ಯ ಕುಲಾಲ್ ಅವರ ಹೆಸರು ಮತ್ತೆ ಕೇಳಿ ಬಂದಿದೆ. ಡಾ| ಅಣ್ಣಯ್ಯ ಕುಲಾಲ್ ಬಿಜೆಪಿ ನಾಯಕರಾಗಿದ್ದರೂ ಕೂಡ ಕಾಂಗ್ರೆಸ್ನ ಹಿರಿಯ ನಾಯಕ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರು ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ 20ನೇ ವಾರ್ಷಿಕೋತ್ಸವದ ಸಮಾರಂಭದ ವೇದಿಕೆಯಲ್ಲಿ ಅಣ್ಣಯ್ಯ ಕುಲಾಲ್ ಅವರು ಸುದೀರ್ಘ ವರ್ಷದಿಂದ ಬಿಜೆಪಿಯಲ್ಲಿ ನಿಷ್ಠಾವಂತರಾಗಿ ದೇವೆ ಸಲ್ಲಿಸುತ್ತಿರುವ ಕಾರಣ ವಿಧಾನಪರಿಷತ್ ಸ್ಥಾನ ನೀಡಬೇಕು, ಇಲ್ಲವಾದಲ್ಲಿ ನಮ್ಮ ಪಕ್ಷದಿಂದ ಈ ಅವಕಾಶ ನೀಡುವುದಾಗಿ ಹೇಳಿದ್ದರು. ಅದೇ ವೇದಿಕೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನಮ್ಮ ಪಕ್ಷದ ನಾಯಕನನ್ನು ನಾವು ಯಾವು ಕಾರಣಕ್ಕೂ ಬಿಟ್ಟು ಕೊಡಲು ಸಾಧ್ಯವೇ ಇಲ್ಲ. ನಾವೇ ಅವರಿಗೆ ಸೂಕ್ತ ಸ್ಥಾನ ನೀಡುತ್ತೇವೆ ಎಂದು ಘೋಷಿಸಿದ್ದರು. ವೇದಿಕೆಯಲ್ಲಿದ್ದ ಶಾಸಕರುಗಳಾದ ವೇದವ್ಯಾಸ ಕಾಮತ್, ಡಾ| ಭರತ್ ಶೆಟ್ಟಿ ಬೆಂಬಲಿಸಿದ್ದರು. ಎಲ್ಲಾ ವಿಧದಲ್ಲೂ ಅರ್ಹತೆಯನ್ನು ಹೊಂದಿರುವ, ವಿದ್ಯಾವಂತ, ಸಂಘಟಕ, ಹೋರಾಟಗಾರ ಮಾತ್ರವಲ್ಲದೆ ಹಲವು ಕ್ಷೇತ್ರಗಳಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡಿರುವ ಡಾ. ಅಣ್ಣಯ್ಯ ಕುಲಾಲ್ ಅವರನ್ನು ಪಕ್ಷ ಪರಿಗಣಿಸಿದ್ದಲ್ಲಿ ವಿಧಾನ ಪರಿಷತ್ತಿಗೆ ನಾಮನಿರ್ದೇಶನಗೊಳಿಸಲು ಇದು ಸಕಾಲ. ಸಮುದಾಯದ ಹಲವು ವರ್ಷದ ಕೂಗಿಗೂ ನ್ಯಾಯ ಕಲ್ಪಿಸಿದಂತಾಗುತ್ತದೆ.
ಡಾ. ಅಣ್ಣಯ್ಯ ಕುಲಾಲ್ಗೆ ಯಾಕೆ ಬೇಕು?
ರಾಷ್ಟ್ರೀಯ ಪಕ್ಷ ಬಿಜೆಪಿಯಲ್ಲಿ ಹಲವಾರು ನಾಯಕರು ಇದ್ದರೂ ಡಾ| ಅಣ್ಣಯ್ಯ ಕುಲಾಲ್ ಅವರನ್ನೇ ಯಾಕೆ ಈ ಸ್ಥಾನಕ್ಕೆ ಪರಿಗಣಿಸಬೇಕು ಎನ್ನುವ ಪ್ರಶ್ನೆಗಳು ಸಾಮಾನ್ಯ. ಡಾ| ಅಣ್ಣಯ್ಯ ಕುಲಾಲ್ ಅವರು ಪಕ್ಷ, ಹೋರಾಟ, ಸಂಘಟನೆ, ಸಮುದಾಯದ ನಾಯಕನಾಗಿ ಗುರುತಿಸಿಕೊಂಡವರು. ಇವರ ನಾಯಕತ್ವ ಗುಣಕ್ಕೆ ಮೂಲ ಪ್ರೇರಣೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಸಂಘದ ಸ್ವಯಂ ಸೇವಕನಾಗಿ, ಕಳೆದ 35 ವರ್ಷಗಳಿಂದ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಗುರುತಿಸಿಕೊಂಡವರು. ಪಕ್ಷದಲ್ಲಿನ ಇಷ್ಟು ವರ್ಷದ ಸೇವೆಗೆ ಯಾವುದೇ ಸ್ಥಾನ ಸಿಕ್ಕಿಲ್ಲ ಎಂದು ಪಕ್ಷ ಬಿಟ್ಟು ದೂರ ನಿಂತವರಲ್ಲ.
ಕುಂಬಾರ ಸಮುದಾಯದ ಮುಂಚೂಣಿ ನಾಯಕನಾಗಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿ ರಾಜ್ಯದ 30 ಜಿಲ್ಲೆಗಳಲ್ಲೂ ಚಿರಪರಿಚಿತರಿವರು. ವೈದ್ಯ ಸಂಘಟನೆಗಳಲ್ಲಿ ಮೇಲ್ಸ್ತರದಲ್ಲಿ ಗುರುತಿಸಿಕೊಂಡವರು. ಜಿಲ್ಲೆಯ ಪ್ರಮುಖ ಹೋರಾಟಗಳ ನೇತೃತ್ವ ವಹಿಸಿ ಯಶಸ್ವಿಗೊಳಿಸಿದ ಹೆಗ್ಗಳಿಕೆ ಇವರದ್ದು. ತುಳು, ಕನ್ನಡ, ಕುಂದಗನ್ನಡ ಸಾಹಿತ್ಯ ಕೇತ್ರದಲ್ಲೂ ಛಾಪು ಮೂಡಿಸಿದ ಪ್ರತಿಭಾನ್ವಿತ. ಬ್ಯಾರಿ ಭಾಷ ಪಠ್ಯ ಪುಸ್ತಕ ಸಮಿತಿಯ ಸಂಪನ್ಮೂಲ ವ್ಯಕ್ಯಿಯಾಗಿ ಗುರುತಿಸಿಕೊಂಡಿರುವ ಇವರು ಜಿಲ್ಲೆಯ ಎಲ್ಲಾ ವರ್ಗದ, ಎಲ್ಲಾ ಧರ್ಮದ ಜನರಿಗೂ ಬೇಕಾದವರು. ರಾಜ್ಯದಲ್ಲಿ ೨೫ ಲಕ್ಷ ಜನಸಂಖ್ಯೆ ಹೊಂದಿರುವ ಕುಂಬಾರ ಸಮುದಾಯದ ತುಳು ಮೂಲ್ಯ ಕುಲಾಲ ಹಾಂಡ , ಕನ್ನಡ ಕುಂಬಾರ, ಗುಣಗ, ತೆಲುಗು ಕುಂಬಾರ, ತಮಿಳು ಕುಂಬಾರ, ಲಿಂಗಾಯತ ಕುಂಬಾರ, ಚಕ್ರಸಾಲಿ ಜನಾಂಗವನ್ನು ರಾಜ್ಯ ಮಟ್ಟದಲ್ಲಿ ಸಂಘಟಿಸಿ ಕರ್ನಾಟಕ ರಾಜ್ಯ ಕುಂಬಾರ ಮಹಾಸಂಘ ಕಟ್ಟಿ ಅದರ ರಾಜ್ಯ ಕಾರ್ಯಾಧ್ಯಕ್ಷರಾಗಿ ದುಡಿದು ಅವರೆಲ್ಲರನ್ನ ಪ್ರತಿನಿಧಿಸುವ ಸೂಕ್ತ ವ್ಯಕ್ತಿಯಾಗಿರುವ ಇವರು, ಇಡೀ ರಾಜ್ಯದ ಕುಂಬಾರ ನಾಯಕರನ್ನ ಸೇರಿಸಿ ಕೊಂಡು ಸರ್ವಜ್ಞ ಜಯಂತಿ ಚಳುವಳಿ, ಕುಂಭ ಕಲಾ ಅಭಿವೃದ್ಧಿ ನಿಗಮ ಸ್ಥಾಪನಾ ಚಳುವಳಿಯ ಮುಂಚೂಣಿಯ ನಾಯಕತ್ವ ನೀಡಿದ ಡಾ ಅಣ್ಣಯ್ಯ ಕುಲಾಲ್ ಅವರಿಗೆ ಈ ಸ್ಥಾನ ಸಿಕ್ಕಿದ್ದಲ್ಲಿ ಹಿಂದುಳಿದ ವರ್ಗಗಳಲ್ಲೊಂದಾದ ಕುಲಾಲ ಸಮುದಾಯದಕ್ಕೂ ಸೂಕ್ತ ಸ್ಥಾನಮಾನ ನೀಡಿದಂತಾಗುತ್ತದೆ ಹಾಗು ಅವಕಾಶ ವಂಚಿತ ಕುಂಬಾರ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕೊಟ್ಟಂತಾಗುತ್ತೆ.