ಬಂಟ್ವಾಳ: 51 ವರ್ಷಗಳನ್ನು ಪೂರೈಸಿರುವ ರೋಟರಿ ಕ್ಲಬ್ ಬಂಟ್ವಾಳ ರೋಟರಿ ಜಿಲ್ಲೆ 3181ರ 2019-20ನೇ ಸಾಲಿನ ಅತ್ಯುತ್ತಮ ಕ್ಲಬ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಒಟ್ಟು ೩೨ ಪ್ರಶಸ್ತಿಗಳನ್ನು ಪಡೆದುಕೊಂಡು ಎರಡನೇ ಬಾರಿಗೆ ಅತ್ಯುತ್ತಮ ಕ್ಲಬ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಜಿಲ್ಲಾ ಗವರ್ನರ್ ಜೋಸೆಫ್ ಮ್ಯಾಥ್ಯು ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಶಿವಾನಿ ಬಾಳಿಗ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ನಿಯೋಜಿತ ಜಿಲ್ಲಾ ಗವರ್ನರ್ ರಂಗನಾಥ ಭಟ್, 2021-22 ಸಾಲಿನ ನಿಯೋಜಿತ ಗವರ್ನರ್ ರವಿಂದ್ರ ಭಟ್, 2022-23ನೇ ಸಾಲಿನ ನಿಯೋಜಿತ ಗವರ್ನರ್ ಪ್ರಕಾಶ್ ಕಾರಂತ್ ಈ ಸರಳ ಸಮಾರಂಭದಲ್ಲಿ ಉಪಸ್ಥಿತರಿದ್ದರು. ವಲಯ ೪ರ ಸಹಾಯಕ ಗವರ್ನರ್ ರಿತೇಶ್ ಬಾಳಿಗ ಮತ್ತು ವಲಯ ೫ರ ಸಹಾಯಕ ಗವರ್ನರ್ ಡಾ. ಕೇಶವ ಪಿ.ಕೆ. ಪ್ರಶಸ್ತಿಗಳನ್ನು ಪ್ರಕಟಿಸಿದರು. ಕಾರ್ಯದರ್ಶಿ ಸ್ಮಿತಾ ಸಲ್ದಾನ, ನಿಕಟಪೂರ್ವ ಅಧ್ಯಕ್ಷ ಮಂಜುನಾಥ ಆಚಾರ್ಯ, ಸದಸ್ಯರಾದ ಡಾ.ರಮೇಶಾನಂದ ಸೋಮಯಾಜಿ, ಮಹಮ್ಮದ್ ವಳವೂರು, ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೋ ಹಿಲ್ಸ್ ಪ್ರಾಯೋಜಕತ್ವದಲ್ಲಿ ನಡೆದ ಸಮಾರಂಭದಲ್ಲಿ ಅಧ್ಯಕ್ಷ ಪದ್ಮರಾಜ್ ಬಲ್ಲಾಳ್ ಸ್ವಾಗತಿಸಿ, ಕಾರ್ಯದರ್ಶಿ ಶೃತಿ ಮಾಡ್ತ ವಂದಿಸಿದರು.
ಈ ವರ್ಷ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಿರುವ ಬಂಟ್ವಾಳ ರೋಟರಿ ಕ್ಲಬ್ ಸಿದ್ಧಕಟ್ಟೆ ಸರಕಾರಿ ಪ್ರೌಢಶಾಲೆಗೆ ಸುಮಾರು 6.50 ಲಕ್ಷ ರೂಪಾಯಿ ವೆಚ್ಚದಲ್ಲಿ ಶಾಲಾ ಕಟ್ಟಡಗಳ ನವೀಕರಣ, ಶುದ್ಧ ಕುಡಿಯುವ ನೀರಿನ ಘಟಕ, ವಿದ್ಯಾರ್ಥಿನಿಯರಿಗಾಗಿ ಸ್ನಾನ ಗೃಹ, ಶೌಚಾಲಯ ನಿರ್ಮಾಣ, ಸೋಮಯಾಜಿ ಆಸ್ಪತ್ರೆ ಸಹಯೋಗದೊಂದಿಗೆ ಒಂದು ಅಂಬ್ಯುಲೆನ್ಸ್ ಕೊಡುಗೆ, ರೋಟರಿ ದತ್ತಿ ನಿಧಿಗೆ ಸುಮಾರು 20 ಲಕ್ಷ ರೂಪಾಯಿ ದೇಣಿಗೆ, ಬಂಟ್ವಾಳ ಸರಕಾರಿ ಪ್ರಥ ದರ್ಜೆ ಕಾಲೇಜಿಗೆ ಸುಮಾರು 1 ಲಕ್ಷ ರೂಪಾಯಿ ವೆಚ್ಚದಲ್ಲಿ ಕಂಪ್ಯೂಟರ್ ಮತ್ತು ಜೆರಾಕ್ಸ್ ಯಂತ್ರವನ್ನು ಕೊಡುಗೆಯಾಗಿ ನೀಡಿದೆ. ತಾಲೂಕಿನ ಹಲವು ಶಾಲೆಗಳಿಗೆ ಮೂಲಭೂತ ಸೌಲಭ್ಯವನ್ನು ಒದಗಿಸಲಾಗಿದೆ. ಜೀವನ ಸಂಧ್ಯಾ ಜಿಲ್ಲಾ ಕಾರ್ಯಕ್ರಮದಡಿ ವಿವಿಧ ವೃದ್ದಾಶ್ರಮಗಳ ಭೇಟಿ, ಸೌಲಭ್ಯಗಳ ಕೊಡುಗೆ ನೀಡಲಾಗಿದೆ.