ಸಂದೀಪ್ ಸಾಲ್ಯಾನ್
ಬಂಟ್ವಾಳ: ಖಾಕಿ ಸಮವಸ್ತ್ರ ತೊಟ್ಟು ಪೊಲೀಸರಂತೆ ಕೆಲಸ ನಿರ್ವಹಿಸುವ ಇನ್ನೊಂದು ವರ್ಗ ಹೋಂಗಾರ್ಡ್ಸ್. ಪೊಲೀಸ್ ಇಲಾಖೆ ಸೇರಿದಂತೆ ಸರಕಾರದ ವಿವಿಧ ಇಲಾಖೆಗಳಲ್ಲಿ ರಾತ್ರಿ ಹಗಲೆನ್ನದೆ ಪಾಳಿಯಲ್ಲಿ ದುಡಿಯುವ ಗೃಹರಕ್ಷಕರ ಸೇವೆಗೆ ತಕ್ಕ ಮಾನ್ಯತೆ ಸಿಗುತ್ತಿಲ್ಲ. ಸಿಗುತ್ತಿರುವ ಗೌರವಧನದಲ್ಲೂ ತಾರತಮ್ಯ ಇದೆ.
ವೈದ್ಯರು, ಆಶಾಕಾರ್ಯಕರ್ತೆಯರು, ಪೌರಕಾರ್ಮಿಕರು, ಪೊಲೀಸರು, ವಿವಿಧ ಇಲಾಖೆಯ ಅಧಿಕಾರಿಗಳಂತೆ ಗೃಹರಕ್ಷಕರು ಕೂಡ ಕರೋನಾ ಸೇನಾನಿಗಳಾಗಿ ಕರ್ತವ್ಯ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಇಂತಹ ಸಂಕಷ್ಟ ಕಾಲದಲ್ಲೂ ಸರಕಾರ ಗೃಹರಕ್ಷಕ ಸಿಬ್ಬಂದಿಗಳಿಗೂ ಸೇವಾ ಭದ್ರತೆ, ಸೌಲಭ್ಯಗಳನ್ನು ಒದಗಿಸಬೇಕೆನ್ನುವ ಕಾಳಜಿ ವಹಿಸದೇ ಇರುವುದು, ವಿಶೇಷ ಪ್ಯಾಕೇಜ್ ಘೋಷಿಸದೇ ಇರುವುದು ಅವರ ಅಸಮಾಧಾನಕ್ಕೆ ಕಾರಣವಾಗಿದೆ.
ಆಶಾ ಕಾರ್ಯಕರ್ತೆಯರಂತೆ ಗೃಹರಕ್ಷಕದಳದ ಸಿಬ್ಬಂದಿಗಳು ಗೌರವಧನ ಪಡೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪುರುಷರಂತೆ ಹಲವು ಮಂದಿ ಮಹಿಳೆಯರು ಕೂಡ ಗೃಹರಕ್ಷಕ ದಳದಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಕಷ್ಟು ಬಡವರ್ಗದವರೇ ಗೃಹರಕ್ಷಕದಳದಲ್ಲಿ ತೊಡಗಿಸಿ ಕೊಂಡಿದ್ದು ಕೋವಿಡ್ ಪ್ರಕರಣಗಳು ಕಾಣಿಸಿಕೊಂಡ ಬಳಿಕವಂತೂ ಗೃಹರಕ್ಷಕ ಸಿಬ್ಬಂದಿಗಳು ರಜೆಪಡೆಯದೇ ಪ್ರತಿದಿನ ಕೆಲಸದಲ್ಲಿ ತೊಡಗಿಸಿಕೊಂಡರೂ ಇವರ ಸೇವೆಗೆ ಸರಿಯಾದ ಬೆಲೆ ಸಿಕ್ಕಿಲ್ಲ. ಇಲಾಖೆಗಳು ತಮ್ಮ ಅಗತ್ಯಕ್ಕೆ ಬೇಕಾಗುವ ಸಂದರ್ಭದಲ್ಲಿ ಬಳಸಿ ಕೊಂಡು ಸೌಲಭ್ಯಗಳನ್ನು ನೀಡುವಾಗ ಕಡೆಗಣಿಸುತ್ತವೆ. ಸಮಯಕ್ಕೆ ಸರಿಯಾಗಿ ಗೌರವಧನ ಸಿಗುವುದಿಲ್ಲ. ತಾಲೂಕಿನಲ್ಲಿ ೬೦ಕ್ಕಿಂತಲೂ ಅಧಿಕ ಮಂದಿ ಗೃಹರಕ್ಷಕರು ಪ್ರತಿದಿನ ವಿವಿಧ ಇಲಾಖೆಗಳಲ್ಲಿ ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕೋವಿಡ್ ಸಂದರ್ಬದಲ್ಲಿ ಸರಕಾರದಿಂದ ಮಾಸ್ಕ್ ಆಗಲಿ, ಸ್ಯಾನಿಟೈಸರ್ ಆಗಲಿ ಸಿಕ್ಕಿಲ್ಲ. ಪಡಿತರ ಕಿಟ್ಗಳು ದೊರೆತಿಲ್ಲ. ಬಂಟ್ವಾಳ ತಾಲೂಕಿನಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಮಾತ್ರ ಎಲ್ಲಾ ಸಿಬ್ಬಂದಿಗಳಿಗೆ ಆಹಾರದ ಕಿಟ್ ನೀಡಿದ್ದಾರೆ. ಅದನ್ನು ಹೊರತು ಪಡಿಸಿ ಬೇರೆ ಸಂಘಟನೆಗಳಾಗಿ, ದಾನಿಗಳಾಗಲಿ ಗೃಹರಕ್ಷಕರನ್ನು ಗುರುತಿಸಿಲ್ಲ ಎನ್ನುವ ಅಳಲು ಗೃಹರಕ್ಷಕ ಸಿಬ್ಬಂದಿಗಳದ್ದು.
ಕಾನೂನು ಸುವ್ಯವಸ್ಥೆ ಹದಗೆಟ್ಟು ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಾದಾಗ ಸರಕಾರಕ್ಕೆ ಮೊದಲಿಗೆ ನೆನಪಾಗುವುದು ಗೃಹರಕ್ಷಕದಳದ ಸಿಬ್ಬಂದಿಗಳು. ವಿವಿಧ ಇಲಾಖೆಗಳ ಕಚೇರಿಗಳು, ಸರಕಾರಿ ಅಧಿಕಾರಿಗಳಿಗೆ ಮನೆಗಳಿಗೆ ಭದ್ರತೆ ಒದಗಿಸಲು ಸಹ ಸರಕಾರಕ್ಕೆ ಇವರೇ ಬೇಕು. ಆದರೆ ಅವರಿಗೆ ವೇತನ, ಭದ್ರತೆ ಒದಗಿಸುವ ವಿಷಯದಲ್ಲಿ ಸ್ವತಃ ಸರಕಾರವೇ ಕಾನೂನು ಉಲ್ಲಂಘಿಸುತ್ತದೆ. ಕಾನೂನು ಪ್ರಕಾರ ಸರಕಾರಿ, ಅರೆ ಸರಕಾರಿ, ಖಾಸಗಿ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುವ ನೌಕರರು ಮತ್ತು ಕಾರ್ಮಿಕರಿಗೆ ಕನಿಷ್ಠ ವೇತನ, ಭವಿಷ್ಯ ನಿಧಿ ಮತ್ತು ಇಎಸ್ಐ ಕಡ್ಡಾಯವಾಗಿರುತ್ತದೆ. ಖಾಸಗಿ ಸೆಕ್ಯೂರಿಟಿ ಏಜೆನ್ಸಿ, ಸರಕಾರದ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ನೌಕರರು, ಖಾಸಗಿ ಸಂಸ್ಥೆಗಳು, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೂ ಈ ಎಲ್ಲಾ ಸೌಲಭ್ಯ ಕಡ್ಡಾಯ. ಸೌಲಭ್ಯ ಕೊಡದೇ ಹೋದಲ್ಲಿ ಅಂತಹ ಸಂಸ್ಥೆ, ಏಜೆನ್ಸಿ ಅಥವಾ ಕಾರ್ಖಾನೆಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ಅದೇ ಸರಕಾರ ತನ್ನದೇ ಅಂಗ ಸಂಸ್ಥೆ ಗೃಹರಕ್ಷಕದಳದ ಸಿಬ್ಬಂದಿಗೆ ಮಾತ್ರ ಗೌರವ ಧನ ಕೊಡುವುದು ಬಿಟ್ಟರೆ ಮತ್ಯಾವುದೇ ಸೌಲಭ್ಯ ನೀಡುತ್ತಿಲ್ಲ. ಸಂಬಳ ಸವಲತ್ತಿನ ವಿಷಯ ಬಂದಾಗ ಗೃಹರಕ್ಷಕರನ್ನು ದೂರ ಇರಿಸಿಯೇ ನೋಡುವ ಪರಿಸ್ಥಿತಿ ರಾಜ್ಯದಲಿದೆ.