ಬಂಟ್ವಾಳ: ಬಿ.ಸಿ.ರೋಡಿನ ಪರಿಸರದಲ್ಲಿರುವ ನಿರಾಶ್ರಿತರಿಗೆ ರಾತ್ರಿಯ ಊಟ, ಹಸಿದ ಬೀದಿನಾಯಿಗಳಿಗೂ ನಿತ್ಯ ಆಹಾರ, ಮನೆಯಲ್ಲಿ ದಿನಸಿ ಖಾಲಿಯಾಗಿದೆ ಏನಾದ್ರೂ ವ್ಯವಸ್ಥೆ ಮಾಡಿ ಎನ್ನುವ ಮನವಿ ಬಂದರೆ ಸಾಕು ಮನೆಯನ್ನು ಹುಡುಕಿಕೊಂಡು ಹೋಗಿ ಅಂತಹ ಬಡವರಿಗೆ ಸೇವೆ ನೀಡುವ ಹೃದಯವಂತ ಇಕ್ಬಾಲ್.
ಬಂಟ್ವಾಳ ಪುರಸಭೆಯ ಕಿರಿಯ ಅಭಿಯಂತರರ ಸಹಾಯಕರಾಗಿರುವ ಇಕ್ಬಾಲ್ ಭಾರತೀಯ ಮಾನವ ಹಕ್ಕುಗಳ ಸಂರಕ್ಷಣ ವೇದಿಕೆಯ ಜಿಲ್ಲಾಧ್ಯಕ್ಷರೂ ಆಗಿದ್ದಾರೆ. ಮಾನವೀಯ ಸ್ಪಂದನೆ ಇಕ್ಬಾಲ್ ರೂಡಿಸಿಕೊಂಡಿರುವ ವಿಶೇಷ ಗುಣ. ಕೊರೋನಾ ಲಾಕ್ ಡೌನ್ ಆರಂಭಗೊಂಡ ಬಳಿಕ ನಾವೆಲ್ಲರೂ ಮನೆಯಲ್ಲಿ ಉಳಿದುಕೊಂಡಿದ್ದರೆ ಇಕ್ಬಾಲ್ ಪುರಸಭೆಯ ತನ್ನ ಕರ್ತವ್ಯದೊಂದಿಗೆ ಜನರ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಲಾಕ್ ಡೌನ್ ಆರಂಭಗೊಂಡಂದಿನಿಂದ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಬಡವರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಪ್ರತಿದಿನ ಮಧ್ಯಾಹ್ನ ಪುರಸಭೆ ಮುಖ್ಯಾಧಿಕಾರಿಯವರೊಂದಿಗೆ ನಿರಾಶ್ರಿತರಿಗೆ, ಅನಾಥರಿಗೆ, ಭಿಕ್ಷುಕರಿಗೆ, ಮಾನಸಿಕ ಅಸ್ವಸ್ಥರಿಗೆ ಊಟ ನೀಡುತ್ತಾರೆ, ತನ್ನ ಮನೆಯಲ್ಲಿ ಸ್ವತಃ ಊಟ ತಯಾರಿಸಿ ರಾತ್ರಿ ಊಟವನ್ನು ನಿರಾಶ್ರಿತರಿಗೆ ನೀಡಿದ್ದಾರೆ. ಇದೀಗ ತನ್ನ ಕರ್ತವ್ಯದ ಒತ್ತಡದಿಂದಾಗಿ ತನ್ನ ಈ ಜವಬ್ದಾರಿಯನ್ನು ಸ್ನೇಹಿತನಿಗೆ ವಹಿಸಿಕೊಟ್ಟಿದ್ದಾರೆ. ಹಸಿವಿನಿಂದ ಕಂಗಲಾಗಿರುವ ಬೀದಿ ನಾಯಿಗಳಿಗೆ ಬಿಸ್ಕಿಟ್ ಹಾಕಿ ಹಸಿವು ತಣಿಸುತ್ತಾರೆ. ಇತ್ತೀಚೆಗೆ ಊರಿಗೆ ಹೋಗಲು ಸಾಧ್ಯವಾಗದೆ ಕಂಗಲಾಗಿದ್ದ ಹಾವೇರಿಯ ಕಾರ್ಮಿಕರನ್ನು ಸುರಕ್ಷಿತವಾಗಿ ಊರಿಗೆ ತಲುಪಿಸುವಲ್ಲಿ ಇಕ್ಬಾಲ್ ಪ್ರಯತ್ನ ಅಪಾರ. ಲಾಕ್ಡೌನ್ ಸಂದರ್ಭ ಹೃದಯ ರೋಗದಿಂದ ಬಳಲುತ್ತಿದ್ದ ಬಿ.ಸಿ.ರೋಡಿನ ಭಿಕ್ಷಕರೊಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ತನ್ನ ಸ್ವಂತ ಹಣದಿಂದ ಮನೆಯಲ್ಲಿಯೇ ಆಹಾರದ ಕಿಟ್ ತಯಾರಿಸಿ ಕೆಳ ಮಧ್ಯಮ ವರ್ಗದವರಿಗೆ ತಲುಪಿಸುತ್ತಾರೆ. ಇವರು ನೀಡುವ ಕಿಟ್ ಅಕ್ಕಿ, ದಿನಸಿ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳನ್ನು ಹೊಂದಿದೆ.ತನ್ನ ಸಹೋದರಿಯ ಮೂಲಕ ಮಾಸ್ಕ್ ತಯಾರಿಸಿ ಹಲವು ಮಂದಿಗೆ ಉಚಿತವಾಗಿ ಹಂಚಿದ್ದಾರೆ. ಇದು ಒಂದು ದಿನದ ಕೆಲಸವಲ್ಲ. ಲಾಕ್ ಡೌನ್ ಆರಂಭವಾದಂದಿನಿಂದ ಇಂದಿನವರೆಗೆ ಇಕ್ಬಾಲ್ ಅವರ ನಿತ್ಯದ ಕಾಯಕ. ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಹಾಗೂ ಕಾರು ಚಾಲಕ ಪುನೀತ್ ಇಕ್ಬಾಲ್ ಅವರ ಸೇವಾ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಜಾತಿ, ಧರ್ಮ, ಮತದ ಭೇದವಿಲ್ಲದೆ ತನ್ನ ಶಕ್ತಿ ಮೀರಿ ಜನರ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ಇಕ್ಬಾಲ್ ಅವರ ಪ್ರಾಮಾಣಿಕ ಪ್ರಯತ್ನ, ಮಾನವೀಯ ಸೇವೆ ಅಭಿನಂದನೀಯ.
ಲಾಕ್ಡೌನ್ ಸಂದರ್ಭ ಇಕ್ಬಾಲ್ ಮಾನವೀಯ ಸೇವೆ
