ಬಂಟ್ವಾಳ: ಕೂಲಿ ಕಾರ್ಮಿಕರಾಗಿ ಬಂಟ್ವಾಳಕ್ಕೆ ಆಗಮಿಸಿ ಬಳಿಕ ಜಿಲ್ಲಾ ಬಂದ್ ನಿಂದ ಊರಿಗೆ ಮರಳಲು ಸಾಧ್ಯವಾಗದೇ ಪರದಾಡುತ್ತುದ್ದ ಹಾವೇರಿಯ ಕಾರ್ಮಿಕರು ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಹಾಗೂ ಪರಿಸರ ಸಹಾಯಕ ಹಾಗೂ ಭಾರತೀಯ ಮಾನವ ಹಕ್ಕು ಸಂರಕ್ಷಣ ವೇದಿಕೆಯ ದ.ಕ.ಜಿಲ್ಲಾಧ್ಯಕ್ಷ ಇಕ್ಬಾಲ್ ಅವರ ಮಾನವೀಯ ನೆರವಿನಿಂದ ಸುರಕ್ಷಿತವಾಗಿ ತಮ್ಮ ಹುಟ್ಟೂರಾದ ಹಾವೇರಿಯನ್ನು ತಲುಪಿದ್ದಾರೆ.
ಕಳೆದ ಭಾನುವಾರ ಸುಮಾರು 30 ಮಂದಿಯಿದ್ದ ಕಾರ್ಮಿಕರ ತಂಡ ಸಣ್ಣ ಮಕ್ಕಳನ್ನು ಹಿಡಿದುಕೊಂಡು ಮೆಲ್ಕಾರ್ ಬಳಿ ನಡೆದು ಹೋಗುತ್ತಿದ್ದರು. ಈ ಸಂದರ್ಭ ಬಿ.ಸಿ.ರೋಡು ಪರಿಸರದಲ್ಲಿ ನಿರ್ಗತಿಕರಿಗೆ ಊಟ ನೀಡಿ ಬರುತ್ತಿದ್ದ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಹಾಗೂ ಇಕ್ಬಾಲ್ ಅವರನ್ನು ಕಂಡು ಅವರೆಲ್ಲರಿಗೂ ಮಧ್ಯಾಹ್ನದ ಊಟ ನೀಡಿ ಬಂಟ್ವಾಳದಲ್ಲಿ ಉಳಿದು ಕೊಳ್ಳಲು ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದರು. ಆದರೆ ಊರಲ್ಲಿ ತಂದೆ, ತಾಯಿ, ಮಕ್ಕಳು ಇದ್ದು ನಾವು ಊರು ಸೇರಲೇ ಬೇಕು ಎಂದು ಹಠ ಹಿಡಿದರು. ತಕ್ಷಣ 108 ಅಂಬ್ಯಲೆನ್ಸ್ ಮೂಲಕ ಅವರನ್ನು ಕಾರ್ಕಳದ ಬಜೆಗೋಳಿ ವರೆಗೆ ತಲುಪಿಸಿ, ಅಲ್ಲಿಂದ ಭಾರತೀಯ ಮಾನವ ಹಕ್ಕುಗಳ ಸಂರಕ್ಷಣ ವೇದಿಕೆಯ ಅಂಬ್ಯುಲೆನ್ಸ್ ಮೂಲಕ ತೀರ್ಥಹಳ್ಳಿಗೆ ತಲುಪಿಸಿ ಅಲ್ಲಿ ಪಾಸ್ ಪಡೆದು ಪ್ರತ್ಯೇಕ ವಾಹನದ ಮೂಲಕ ಹಾವೇರಿಗೆ ತಲುಪಿಸಲಾಗಿದೆ. ಇದೀಗ ಎಲ್ಲಾ ಕಾರ್ಮಿಕರು ಅವರವರ ಮನೆ ಸೇರಿದ್ದು ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಹಾಗೂ ಸಿಬ್ಬಂದಿ ಇಕ್ಬಾಲ್ ಅವರ ಮಾನವೀಯ ಸ್ಪಂದನೆಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ಪುರಸಭೆ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿಯ ಮಾನವೀಯ ಸ್ಪಂದನೆ: ಊರು ಸೇರಿದ ಹಾವೇರಿಯ ಕಾರ್ಮಿಕರು
