ಬಂಟ್ವಾಳ: ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ರವರ ಅಧ್ಯಕ್ಷತೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಕ್ ಹಾಗೂ ಮಂಗಳೂರು ಕ್ಷೇತ್ರ ಶಾಸಕ ಯು.ಟಿ.ಖಾದರ್ರವರ ಸಮಕ್ಷಮದಲ್ಲಿ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯಲ್ಲಿ ಬಂಟ್ವಾಳ ಸಜಿಪನಡು ಕಂಚಿನಡ್ಕಪದವು ತ್ಯಾಜ್ಯ ಸಂಸ್ಕರಣಾ ಘಟಕದ ನಿವೇಶನದಲ್ಲಿ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಸಂಗ್ರಹಿಸಲಾದ ಒಣಕಸಗಳನ್ನು ಹಾಕಲು ತೀರ್ಮಾನ ಕೈಗೊಳ್ಳಲಾಗಿದೆ. ಬಂಟ್ವಾಳ ಪುರಸಭಾ ವ್ಯಾಪ್ತಿಯ ಮನೆ ಮನೆ ಕಸಗಳನ್ನು ಮೂಲದಿಂದಲೇ ಮನೆಯವರು ಹಸಿಕಸ ಮತ್ತು ಒಣಕಸಗಳನ್ನು ಬೇರ್ಪಡಿಸಿ ಪುರಸಭೆಯ ವಾಹನಕ್ಕೆ ನೀಡಬೇಕೆಂದು ಜಿಲ್ಲಾಧಿಕಾರಿಯವರು ಸಭೆಯಲ್ಲಿ ತೀರ್ಮಾನ ಕೈಗೊಂಡಿರುವುದರಿಂದ ಮಾ.23ರಿಂದ ಬಂಟ್ವಾಳ ಪುರಸಭಾ ವ್ಯಾಪ್ತಿಯ ಎಲ್ಲಾ ಮನೆಯವರು ಕಸಗಳನ್ನು ಹಸಿಕಸ ಮತ್ತು ಒಣಕಸಗಳನ್ನು ಬೇರೆ ಬೇರೆ ಮಾಡಿ ಬೇರ್ಪಡಿಸಿ ಪುರಸಭೆ ವಾಹನಕ್ಕೆ ನೀಡುವಂತೆ ತಿಳಿಸಲಾಗಿದೆ. ಇದಕ್ಕೆ ನಿರಾಕರಿಸಿದ ಮನೆಯವರ ಮೇಲೆ ದಂಡ ವಿಧಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.