ಬಂಟ್ವಾಳ: ಮಂಗಳೂರಿಗೆ ನೀರು ಸರಬರಾಜು ಮಾಡುವ ತುಂಬೆ ವೆಂಟೆಡ್ ಡ್ಯಾಂಗೆ ಶುಕ್ರವಾರ ಸಂಜೆ ನಗರಾಭಿವೃದ್ದಿ ಸಚಿವ ಭೈರತಿ ಬಸವರಾಜ್ ಭೇಟಿ ನೀಡಿದ್ದಾರೆ. ಡ್ಯಾಂನಲ್ಲಿ ಲಭ್ಯವಿರುವ ನೀರಿನ ಸಂಗ್ರಹವನ್ನು ಪರೀಶಿಲಿಸಿದ ಸಚಿವರಿಗೆ ಮನಾಪಾ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಅವರು ಪೂರಕ ಮಾಹಿತಿ ನೀಡಿದರು. ಡ್ಯಾಂ ಸನಿಹದಲ್ಲೇ ತಡೆಗೋಡೆ ಕುಸಿದಿರುವ ವಿಚಾರವನ್ನು ಸಚಿವರ ಗಮನಕ್ಕೆ ತಂದ ಆಯುಕ್ತರು ತಡೆಗೋಡೆ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನವನ್ನು ಮುಂದಿನ ಬಜೆಟ್ನಲ್ಲಿ ಒದಗಿಸುವ ಬಗ್ಗೆ ಭರವಸೆ ನೀಡಿದರು.
ಬಳಿಕ ಮಾತನಾಡಿದ ಸಚಿವ ಭೈರತಿ ಬಸವರಾಜ್ ಮನಪಾದ ಪ್ರಗತಿ ಪರಿಶೀಲನಾ ಸಭೆಯ ಹಿನ್ನಲೆಯಲ್ಲಿ ಮಂಗಳೂರಿಗೆ ಆಗಮಿಸಿದ್ದು ಅದಕ್ಕೂ ಪೂರ್ವಭಾವಿಯಾಗಿ ತುಂಬೆ ಡ್ಯಾಂಗೆ ಭೇಟಿ ಕೈಕೊಟ್ಟಿದ್ದೇನೆ. ಇಲ್ಲಿನ ಕೆಲವೊಂದು ಸಮಸ್ಯೆಗಳ ಬಗ್ಗೆ ಆಯುಕ್ತರು ನನ್ನ ಗಮನಕ್ಕೆ ತಂದಿದ್ದು ಅದರ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಶನಿವಾರ ಮನಪಾ, ಮೂಡ, ಸ್ಮಾರ್ಟ್ ಸಿಟಿಯ ಕುರಿತಾದ ಸಭೆಗಳಿದ್ದು ಮಂಗಳೂರಿನ ಸಮಗ್ರ ಅಭಿವೃದ್ದಿಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸುವುದಾಗಿ ತಿಳಿಸಿದರು.
ಈ ಸಂದರ್ಭ ಮನಾಪ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಮಾಜಿ ಮೇಯರ್ ಭಾಸ್ಕರ ಮೊಯಿಲಿ, ಉಪ ಆಯುಕ್ತರಾದ ಸಂತೋಷ್ ಕುಮಾರ್, ಗಣೇಶ್, ಕಾರ್ಯಪಾಲಕ ಇಂಜಿನಿಯರ್ ಮರಳೀಹಳ್ಳಿ, ರವಿಶಂಕರ್, ನರೇಶ್ ಶೆಣೈ, ಕಿರಿಯ ಅಭಿಯಂತರ ರಿಚರ್ಡ್, ರಾಜೇಶ್ ಸುವರ್ಣ, ಸುಧಾಕರ ಮೊದಲಾದವರು ಉಪಸ್ಥಿತರಿದ್ದರು.
ತುಂಬೆ ವೆಂಟೆಡ್ ಡ್ಯಾಂಗೆ ನಗರಾಭಿವೃದ್ದಿ ಸಚಿವ ಭೈರತಿ ಬಸವರಾಜ್ ಭೇಟಿ
