ಬಂಟ್ವಾಳ: ತಾಲೂಕಿನ ದಡ್ಡಲಕಾಡು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ 6ನೇ ತರಗತಿಯ ವಿದ್ಯಾರ್ಥಿ ಅನ್ವೇಶ್ರಾಜ್ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಇನ್ಸ್ಪೈರ್ ಅವಾರ್ಡ್ ವಸ್ತುಪ್ರದರ್ಶನ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನವದೆಹಲಿ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಬೆಂಗಳೂರು, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಮಂಡ್ಯ, ಸಾರ್ವಜನಿಕ ಶಿಕ್ಷಣ ಇಲಾಖೆ ಮಂಡ್ಯ ಇದರ ಆಶ್ರಯದಲ್ಲಿ ಮಂಡ್ಯದಲ್ಲಿ ನಡೆದ ರಾಜ್ಯಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಇನ್ಸ್ಪೈರ್ ಅವಾರ್ಡ್ ವಸ್ತುಪ್ರದರ್ಶನ ಸ್ಪರ್ಧೆಯಲ್ಲಿ ಅನ್ವೇಶ್ರಾಜ್ ಪ್ರದರ್ಶಿಸಿದ ಸೈಕಲ್ ಬ್ಯಾಗ್ ರಾಷ್ಟ್ರಮಟ್ಟದ ಪ್ರದರ್ಶನಕ್ಕೆ ಆಯ್ಕೆಯಾಗಿದೆ.
ಇತ್ತೀಚಿಗೆ ಮಂಗಳೂರಿನ ಪಿಲಿಕುಳದಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದ ಅನ್ವೇಶ್ ರಾಜ್ ಅವರ ನೂತನ ಆವಿಷ್ಕಾರ ಮಂಡ್ಯದಲ್ಲಿ ನಡೆದ ಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದೆ. ಗ್ರಾಮೀಣ ಭಾಗದ ಸರಕಾರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಯ ಈ ಸಾಧನೆ ಶಾಲೆಯಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಶಾಲಾ ಶಿಕ್ಷಕಿ ಅನಿತಾ ಅವರ ಮಾರ್ಗದರ್ಶನದಲ್ಲಿ ಅನ್ವೇಶ್ ರಾಜ್ ಈ ಮಾದರಿ ತಯಾರಿಸಿದ್ದಾನೆ.
ದಡ್ಡಲಕಾಡು ಸರಕಾರಿ ಶಾಲೆಯ ವಿದ್ಯಾರ್ಥಿ ಅನ್ವೇಶ್ ರಾಜ್ ಆವಿಷ್ಕಾರ ರಾಷ್ಟ್ರಮಟ್ಟಕ್ಕೆ ಆಯ್ಕೆ
