ಬಂಟ್ವಾಳ: ತಾಲೂಕಿನ ಲೊರೆಟ್ಟೋ ಪವಿನಲ್ಲಿರುವ ಲೋರೆಟ್ಟೊ ಮಾತಾ ಚರ್ಚ್ನಲ್ಲಿ ಕ್ರಿಸ್ಮಸ್ ಸಂಭ್ರಮವನ್ನು ಮಂಗಳವಾರ ಕ್ರೈಸ್ತ ಬಂಧುಗಳು ವಿಜೃಂಭಣೆಯಿಂದ ಆಚರಿಸಿದರು.
ಸಾಯಂಕಾಲದ ಬಲಿಪುಜೆಯಲ್ಲಿ ಸಾವಿರಾರು ಭಕ್ತಾದಿಗಳು ಭಕ್ತಿಯಿಂದ ಯೇಸು ಕ್ರಿಸ್ತರ ಜನನವನ್ನು ಬಲಿಪುಜೆಯೊಂದಿಗೆ ಆಚರಿಸಿದರು. ಪ್ರಧಾನ ಧರ್ಮ ಗುರುಗಳಾಗಿ ವಂದನೀಯ ಜೊಸ್ಸಿ ಲೋಬೊ ರವರು, ಚರ್ಚ್ ಧರ್ಮಗುರುಗಳಾದ ವಂದನೀಯ ಎಲಿಯಸ್ ಡಿಸೋಜಾ, ವಂದನೀಯ ದಿಲ್ರಾಜ್ ಸಿಕ್ವೆರ, ವಂದನೀಯ ಚಾರ್ಲ್ಸ್ ರವರು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳೊಂದಿಗೆ ಅರ್ಪಿಸಿದರು. ಬಲಿಪೂಜೆಗೆ ಸಹಕರಿಸಿದ ದಾನಿಗಳಿಗೆ ಗೌರವಪೂರ್ವಕವಾಗಿ ಅಲಂಕರಿಸಿದ ಮೇಣದ ಬತ್ತಿಗಳನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಏಸುಕ್ರಿಸ್ತರರ ಜನುಮ ದಿನಾಚರಣೆಯ ಪ್ರಾಮುಖ್ಯತೆಯ ಬಗ್ಗೆ ಪ್ರಧಾನ ಧರ್ಮಗುರುಗಳು ಪ್ರವಚನ ನೀಡಿದರು. ಚರ್ಚ್ನ್ನು ವಿದ್ಯುತತ ದೀಪಗಳಿಂದ ಅಲಂಕರಿಸಲಾಗಿತ್ತು.
ಚರ್ಚ್ನ ಮುಂಭಾಗದ ಮುಖ್ಯ ರಸ್ತೆಯನ್ನು ಲೋರೆಟ್ಟೊ ಫ್ರೆಂಡ್ಸ್ ಇವರ ಪ್ರಯೋಜಕತ್ವ ದಿಂದ ವಿದ್ಯುದೀಪಾಲಂಕರ ಗೊಳಿಸಲಾಗಿತ್ತು. ಬಲಿ ಪೂಜೆಯ ಬಳಿಕ ಐಸಿವೈಮ್ ನಿಂದ ಸಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಲೊರೆಟ್ಟೊ ಐಸಿವೈಮ್ಗೆ ಬೆಳ್ಳಿ ಹಬ್ಬ ಆಚರಿಸುತ್ತಿದ್ದು ಆ ಪ್ರಯುಕ್ತ ಚರ್ಚ್ ಆವರಣದಲ್ಲಿ ನಿರ್ಮಿಸಿದ ಹಸಿರು ಉದ್ಯಾನವನ ಹಾಗೂ ನಾಮ ಫಲಕವನ್ನೂ ಧರ್ಮಗುರುಗಳು ಉದ್ಘಾಟಿಸಿದರು. ಚರ್ಚ್ ಆವರಣದಲ್ಲಿ ಏಸುಕ್ರಿಸ್ತರ ಜನ್ಮ ದಿನವನ್ನು ಸಾರುವ ಗೋದಲಿಯನ್ನು ಐಸಿವೈಮ್ ಸದಸ್ಯರು ನಿರ್ಮಿಸಿದ್ದು ಆಕರ್ಷಣೆ ಪಡೆದುಕೊಂಡಿತ್ತು. ಚರ್ಚ್ ಆವರಣಕ್ಕೆ ಬಂದ ಸಾಂತಕ್ಲಾಜ್ ಮಕ್ಕಳಿಗೆ ಸಿಹಿ ತಿಂಡಿ ನೀಡಿದರು. ಸಂಭ್ರಮದಲ್ಲಿ ಪಾಲ್ಗೊಂಡ ಎಲ್ಲಾ ಭಕ್ತಾದಿಗಳಿಗೆ ಕಾಫಿ ಹಾಗೂ ಕೇಕ್ ವಿತರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಬನ್ನೂರು ಕುರಿಯನ್ನು ಹರಾಜಿಗೆ ಹಾಕಲಾಗಿದ್ದು ಬರೊಬ್ಬರಿ 28 ಸಾವಿರ ರುಪಾಯಿಗೆ ಭಕ್ತರೊಬ್ಬರು ಹರಾಜಿನಲ್ಲಿ ಪಡೆದುಕೊಂಡರು.