ಬಂಟ್ವಾಳ: ಕವಲು ದಾರಿಯಲ್ಲಿ ಸಾಗುತ್ತಿರುವ ಬಿಲ್ಲವ ಸಮಾಜವನ್ನು ಒಂದೇ ದಿಕ್ಕಿನಲ್ಲಿ ಕೊಂಡೊಯ್ಯುವ ಪ್ರಯತ್ನವಾಗಿ, ಮುಂದಿನ ಬಿಲ್ಲವ ಸಮಾಜ ಹೇಗಿರಬೇಕು ಎನ್ನುವ ಕಲ್ಪನೆಯೊಂದಿಗೆ ಬಿಲ್ಲವ ಕಣ್ಮಣಿಗಳ ಅಭಿನಂದನಾ ಸಮಿತಿ ಆಶ್ರಯ ದಲ್ಲಿ ಬಂಟ್ವಾಳ ತಾಲೂಕು ಬಿಲ್ಲವ ಸಂಘಗಳ ಹಾಗೂ ಯುವವಾಹಿನಿ ಬಂಟ್ವಾಳ ಮತ್ತು ಮಾಣಿ ಘಟಕದ ಸಹಯೋಗದೊಂದಿಗೆ ನಮ ಬಿರುವೆರ್ ಐಕ್ಯತಾ ಸಮಾವೇಶ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ಭಾನುವಾರ ನಡೆಯಿತು.
ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರನ್ನು ಅಭಿನಂದಿಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಸಮಾಜದ ಸ್ವಾಮೀಜಿಗಳು ಪಕ್ಷಾತೀತವಾಗಿ ಇದ್ದರೆ ಸಮಾಜಕ್ಕೆ ಶಕ್ತಿ ಬರುತ್ತದೆ. ಎಲ್ಲರೂ ಸಂಘಟಿತರಾಗಿ ಸಮಾಜದ ಅಭ್ಯುದಯಕ್ಕಾಗಿ ಶ್ರಮಿಸಬೇಕು ಎಂದರು.
ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ನೀಡುವಂತೆ ಇಂದು ಮಾಡಿದ ಸಂಘಟನೆ ಮುಂದೊಂದು ದಿನ ಉತ್ತಮ ಫಲವನ್ನು ನೀಡಲಿದೆ ಎಂದು ತಿಳಿಸಿದರು.
ತಾನು ಈ ಹಿಂದೆ ಮುಜರಾಯಿ ಖಾತೆ ಸಚಿವನಾಗಿದ್ದಾಗ ತುಳುನಾಡಿನ ಗರಡಿ, ದೈವಸ್ಥಾನಗಳಿಗೂ ಸರಕಾರದಿಂದ ನೆರವು ಸಿಗುವ ಪ್ರಯತ್ನ ನಡೆಸಿದ್ದೇನೆ. ಮೌಲ್ಯಾಧಾರಿತ ರಾಜಕಾರಣದಿಂದಾಗಿ ವ್ಯಕ್ತಿಗೆ ಗೌರವ ಸಿಗಲಿದೆ ಎಂದರು.
ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ ಮಕ್ಕಳಿಗೆ ಸರಿಯಾದ ಸಂಸ್ಕಾರವನ್ನು ನೀಡಿ ಬೆಳೆಸುವ ಕಾರ್ಯವನ್ನು ಹೆತ್ತವರು ಮಾಡಬೇಕು. ಸ್ವಾಮೀಜಿಗಳು ಕೇಸರಿ ತೊಟ್ಟ ಬಳಿಕ ರಾಜಕೀಯ ಯೋಚನೆಗಳನ್ನು ಬಿಟ್ಟು ಸಮಸ್ತ ಮನುಕುಲದ ಶ್ರೇಯಸ್ಸಿಗಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು. ಸಮಾಜ ಸಂಘಟಿತವಾದಾಗ ಸ್ಥಾನಮಾಗಳು ತನ್ನಿಂದ ತಾನೇ ಸಿಗುತ್ತದೆ, ಜನಾರ್ದನ ಪೂಜಾರಿಯಂತಹ ರಾಜಕೀಯ ಧ್ರುವತಾರೆಯನ್ನು ಮತ್ತೆ ಈ ಸಮಾಜಕ್ಕೆ ನೀಡುವ ಪ್ರಯತ್ನ ಆಗಬೇಕಾಗಿದೆ ಎಂದರು.
ಬಲ್ಯೊಟ್ಟು ಗುರುಕೃಪಾ ಸೇವಾಶ್ರಮದ ಶ್ರೀ ವಿಖ್ಯಾತನಂದ ಸ್ವಾಮೀಜಿ ಆಶೀರ್ವಚನ ನೀಡಿ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ, ಸಿದ್ದಾಂತದಡಿ ಬಿಲ್ಲವರು ಕೆಲಸ ನಿರ್ವಹಿಸಬೇಕು ಶಿಕ್ಷಣವನ್ನು ನೀಡಿ ಸಮಾಜವನ್ನು ಕಟ್ಟುವ ಕಾರ್ಯ ಆಗಬೇಕು ಎಂದರು.
ಕಾಣಿಯೂರು ಕ್ಷೇತ್ರದ ಮಹಾಬಲ ಸ್ವಾಮೀಜಿ, ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಧರ್ಮದರ್ಶಿ ಕೃಷ್ಣ ಗುರೂಜಿ ಆಶೀರ್ವಚನ ನೀಡಿದರು.
ಬಂಟ್ವಾಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ. ಸೇಸಪ್ಪ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಡಾ. ರಾಜಶೇಖರ ಕೋಟ್ಯಾನ್ ತನಗೆ ನೀಡಿದ ಅಭಿನಂದನೆಯನ್ನು ಇತ್ತೀಚೆಗೆ ನಿಧನರಾದ ತನ್ನ ತಾಯಿಗೆ ಸಮರ್ಪಿಸಿದರು.
ಮುಖ್ಯ ಅತಿಥಿಗಳಾಗಿ ಮೂಡಬಿದಿರೆ ಶಾಸಕ ಉಮನಾಥ ಕೋಟ್ಯಾನ್ ಕಲಬುರ್ಗಿ ಆಕಾಶವಾಣಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ.ಸದಾನಂದ ಪೆರ್ಲ, ಕುದ್ರೋಳಿ ಗೋಕರ್ಣ ಕ್ಷೇತ್ರದ ಅಧ್ಯಕ್ಷ ಎಚ್.ಎಸ್. ಸಾಯಿರಾಮ್, ಬೃಹತ್ ಮತ್ತು ಂದ್ಯಮ ಕೈಗಾರಿಕೆ ಇಲಾಖೆಯ ಸಚಿವರ ಆಪ್ತ ಸಹಾಯಕ ಜಗನ್ನಾಥ ಬಂಗೇರ, ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು, ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ಜಯಂತ ನಡುಬೈಲು, ಶ್ರೀನಾರಾಯಣ ಗುರು ಧರ್ಮ ಪರಿಪಾಲನಾ ಸಂಘದ ಮಹಿಳಾ ಸಮಿತಿ ರಾಜ್ಯಾಧ್ಯಕ್ಷೆ ಗೀತಾಂಜಲಿ ಸುವರ್ಣ, ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ಬಿ. ಇಂದಿರೇಶ್, ಯುವವಾಹಿನಿ ಮಾಣಿ ಘಟಕದ ಅಧ್ಯಕ್ಷ ರಮೇಶ್ ಮುಜಲ ಚಿತ್ರ ನಟಿ ಚಿರಶ್ರೀ ಅಂಚನ್, ತಾಲೂಕಿನ ವಿವಿಧ ಬಿಲ್ಲವ ಸಂಘಟನೆಗಳ ಅಧ್ಯಕ್ಷರು ಉಪಸ್ಥಿತರಿದ್ದರು. ಸಮಿತಿಯ ಗೌರವಾಧ್ಯಕ್ಷರಾದ ರುಕ್ಮಯ ಪೂಜಾರಿ, ಸಂಜೀವ ಪೂಜಾರಿ, ಮಾಯಿಲಪ್ಪ ಸಾಲ್ಯಾನ್ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಅಧ್ಯಕ್ಷ ಯಶವಂತ ದೇರಾಜೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಗದೀಶ್ ಕೊಯ್ಲ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಗೋಪಾಲ ಅಂಚನ್ ವಿವಿಧ ಬೇಡಿಕೆಗಳ ಮನವಿಯನ್ನು ವಾಚಿಸಿದರು. ದಿನೇಶ್ ಸುವರ್ಣ , ಮಹೇಶ್ ಕರ್ಕೆರಾ ಕಾರ್ಯಕ್ರಮ ನಿರೂಪಿಸಿದರು.
ಸಭಾಕಾರ್ಯಕ್ರಮಕ್ಕಿಂತ ಪೂರ್ವಭಾವಿಯಾಗಿ ಬ್ರಹ್ಮಶ್ರೀ ನಾರಾಯಣ ಗುರುಮಂದಿರದಲ್ಲಿ ಗುರುಪೂಜೆ ನೆರವೇರಿಸಿ ಬಳಿಕ ಅತಿಥಿಗಳನ್ನು ಸ್ಪರ್ಶಾ ಕಲಾ ಮಂದಿರದವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು.
॒॒॒॒॒॒॒॒॒॒॒……………………………………………………
ಸಮಾವೇಶದಲ್ಲಿ ಸರಕಾರಕ್ಕೆ ಸಲ್ಲಿಸಿದ ಬೇಡಿಕೆಗಳು:
ನಾರಾಯಣ ಗುರು ಅಧ್ಯಯನ ಪೀಠಕ್ಕೆ ಸರಕಾರವು ಪ್ರತೀ ವರ್ಷ ಬಜೆಟ್ನಲ್ಲಿ ೫ ಕೋಟಿ ರೂ. ಮೀಸಲಿಡಬೇಕು.
ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಪ್ರತೀ ತಾಲೂಕಿನಲ್ಲಿ ಬಿಲ್ಲವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿದ್ಯಾರ್ಥಿ ನಿಲಯ ಸ್ಥಾಪನೆಯಾಗಬೇಕು.
ಪ್ರತೀ ಲೋಕಸಭೆ ಅಥವಾ ವಿಧಾನಸಭಾ ಕ್ಷೇತ್ರವಾರು ರಾಜಕೀಯ ಪ್ರಾತಿನಿಧ್ಯವನ್ನು ಎಲ್ಲಾ ರಾಷ್ಟ್ರೀಯ ಪಕ್ಷಗಳು ನೀಡಬೇಕು
ಸರಕಾರದ ಅಧೀನದಲ್ಲಿರುವ ಎಲ್ಲಾ ಅಕಾಡೆಮಿಗಳು, ನಿಗಮಗಳು, ಮಂಡಳಿಗಳಲ್ಲಿ ಬಿಲ್ಲವ ಸಮುದಾಯಕ್ಕೆ ಸೂಕ್ತ ಸ್ಥಾನಮಾನಗಳನ್ನು ನೀಡಬೇಕು.
ಲಕ್ಷಾಂತರ ಬಿಲ್ಲವರು ಅನಾಧಿಕಾಲದಿಂದಲೂ ಮಾತೃಭಾಷೆಯಾಗಿ ಬಳಸುತ್ತಿರುವ ತುಳು ಭಾಷೆಯನ್ನು ಸರಕಾರ ೮ನೇ ಪರಿಚ್ಚೇದದಲ್ಲಿ ಸೇರಿಸಬೇಕು
ಅನಾದಿಕಾಲದಿಂದಲೂ ಗುಡಿ, ಗರಡಿ, ದೇವಸ್ಥಾನಗಳಲ್ಲಿ ಗಡಿ ಪ್ರಧಾನರಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯರ ಜೀವನಕ್ಕೆ ಸರಕಾರ ವಿಶೇಷ ಆರ್ಥಿಕ ನೆರವು ನೀಡಬೇಕು
ಬಿಲ್ಲವ ಅಭಿವೃದ್ದಿ ನಿಗಮ ಸ್ಥಾಪನೆ
ಬಿ