ಬಂಟ್ವಾಳ: ಪರಿವರ್ತನೆಯ ಕಾಲಘಟದಲ್ಲಿ ನಾವು ಎಲ್ಲವನ್ನು ಮರೆತು ಕೊಂಡು ಬಂದಿದ್ದೇವೆ. ಸಂಸ್ಕಾರ, ಸಂಸ್ಕೃತಿಯನ್ನು ಬಿಟ್ಟು ನಾವು ಬದುಕಬಾರದು ಎನ್ನುವ ಉದ್ದೇಶದಿಂದ ಭಜನಾ ಮಂದಿರಗಳ ನಿರ್ಮಾಣ ಕಾರ್ಯ ಆಗುತ್ತಿದೆ ಎಂದು ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ಬಾಮೀಜಿ ಹೇಳಿದರು.
ಕುರಿಯಾಳ ಗ್ರಾಮ ದುರ್ಗಾನಗರದ ಶ್ರೀ ಓಂಕಾರೇಶ್ವರೀ ದೇವಿ ಭಜನಾ ಮಂದಿರದ ನಿಧಿ ಕುಂಭ ಸಹಿತ ಶಿಲಾನ್ಯಾಸ ನೆರವೇರಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಬೇರೆ ಬೇರೆ ಜಾತಿಯಲ್ಲಿ ಗುರುತಿಸಿಕೊಂಡಿರುವ ನಾವು ನಮ್ಮ ಧರ್ಮದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು. ಶಿಷ್ಟಾಚಾರ, ಸಂಸ್ಕೃತಿಯನ್ನು ಕೈ ಬಿಟ್ಟ ಪರಿಣಾಮವೇ ಇಂದು ನಮ್ಮ ಅವನತಿಯಾಗುತ್ತಿದೆ ಎಂದ ಅವರು ನಮ್ಮಲ್ಲಿ ಧರ್ಮ ಹಾಗೂ ಭಕ್ತಿಯ ಜಾಗೃತಿ ಮೂಡಬೇಕು ಎಂದರು. ಶ್ರೀ ಓಂಕಾರೇಶ್ವರೀ ದೇವಿ ಭಜನಾ ಮಂದಿರದ ನಿರ್ಮಾಣ ಕಾರ್ಯ ಶೀಘ್ರ ನೆರವೇರಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ ತನ್ನ ಧರ್ಮವನ್ನು ಪ್ರೀತಿಸುವುದರ ಜೊತೆಗೆ ಪರ ಧರ್ಮವನ್ನು ಗೌರವಿಸಬೇಕು. ದೇವಸ್ಥಾನದ ಬ್ರಹ್ಮಕಲಶದ ಜೊತೆಗೆ ಆತ್ಮದ ಬ್ರಹ್ಮಕಲಶವಾಗಿ ಪರಿಶುದ್ದವಾಗಬೇಕು. ಜನರನ್ನು ಹೆಚ್ಚು ಪ್ರೀತಿಸುವವನು ದೇವರಿಗೂ ಹತ್ತಿರವಾಗಿರುತ್ತಾನೆ. ಎಲ್ಲರನ್ನೂ ಪ್ರೀತಿಸುವ ಗುಣ ನಮ್ಮದಾಗಲಿ ಎಂದರು. ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ್ ಮಾತನಾಡಿ ದೇವರಿಗೆ ಮಂದಿರಗಳು ಬೇಡ ಆದರೆ ಮನಷ್ಯ ಏಕಾಂತದಲ್ಲಿ ತನ್ನ ಹೃದಯದಲ್ಲಿ ದೇವರನ್ನು ಆರಾಧಿಸಲು ದೇವಸ್ಥಾನ, ಮಂದಿರಗಳು ಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ದೈವಜ್ಞ ಡಾ. ಬಿ.ಕೆ. ಮೋನಪ್ಪ ಆಚಾರ್ಯ ರಾಯಿ, ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್, ಬಿಜೆಪಿ ರಾಜ್ಯ ಸಹವಕ್ತಾರೆ ಸುಲೋಚನಾ ಭಟ್, ಬಿಜೆಪಿ ಕ್ಷೇತ್ರ ಸಮಿತಿ ಉಪಾಧ್ಯಕ್ಷರಾದ ದೇವಪ್ಪ ಪೂಜಾರಿ, ಶ್ರೀಕಾಂತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ್, ಭಂಡಾರಿ ಸಮಾಜ ಸೇವಾ ಸಂಘದ ಅಧ್ಯಕ್ಷ ದಿವಾಕರ ಭಂಡಾರಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ಸಮಿತಿ ಅಧ್ಯಕ್ಷ ಬೇಬಿ ಕುಂದರ್, ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಮಂದಿರದ ಸ್ಥಾಪಕಾಧ್ಯಕ್ಷ ವಿಠಲ ಬಂಗೇರ, ಅಮ್ಟಾಡಿ ಗ್ರಾ.ಪಂ. ಉಪಾಧ್ಯಕ್ಷೆ ಯಶೋಧಾ, ಸದಸ್ಯರಾದ ರತ್ನಾವತಿ, ಚೇತನಾ ಪಾಪುದಡ್ಕ ಧರ್ಮಣ್ಣ ಬಂಗೇರ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ವಸಂತ ವಿ. ಮಣಿಹಳ್ಳ, ಮಂದಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಗದೀಶ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.
ಕೋಶಾಧಿಕಾರಿ ಜಗದೀಶ್ ಬಂಗೇರ ಹೊಸಮಣ್ಣು ಸ್ವಾಗತಿಸಿದರು. ಅಮ್ಟಾಡಿ ಗ್ರಾ. ಪಂ. ಅಧ್ಯಕ್ಷ ಹರೀಶ್ ಶೆಟ್ಟಿ ಪಡು ಪ್ರಸ್ತಾಪಿಸಿದರು. ವನಿತಾ ದುರ್ಗಾನಗರ ವಂದಿಸಿದರು, ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು. ವೇದಮೂರ್ತಿ ಸುದರ್ಶನ್ ಬಲ್ಲಾಳ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು.
ಕುರಿಯಾಳ ದುರ್ಗಾನಗರ ಶ್ರೀ ಓಂಕಾರೆಶ್ವರೀ ದೇವಿ ಭಜನಾ ಮಂದಿರದ ನಿಧಿ ಕುಂಭ ಸಹಿತ ಶಿಲಾನ್ಯಾಸ ಸಮಾರಂಭ