ಬಂಟ್ವಾಳ: ಸರ್ಕಾರಿ ಶಾಲಾ ಉಳಿವಿಕೆ ಹಾಗೂ ಅಭಿವೃದ್ಧಿ ಸಮುದಾಯದ ಮೇಲೆ ನಿಂತಿದೆ. ಈ ನಿಟ್ಟಿನಲ್ಲಿ ಮಜಿ ಶಾಲೆಯು ಇದಕ್ಕೆ ಮಾದರಿಯಾಗಿದೆ. ಖಾಸಗಿ ಶಾಲೆಗಳಲ್ಲಿ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸುವ ರೀತಿಯಲ್ಲಿ ಇಲ್ಲಿ ಪೋಷಕರು ಭಾಗವಹಿಸುವುದನ್ನು ಕಂಡಾಗ ಶಾಲೆಯು ಯಾವ ರೀತಿ ಪೋಷಕರ ಸಂಪರ್ಕದಲ್ಲಿದೆ ಎಂದು ತಿಳಿಯುತ್ತದೆ. ಕೇವಲ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಪೋಷಕರಿಗೆ ಉಪಯೋಗವಾಗುವ ಉಚಿತ ಆರೋಗ್ಯ ಶಿಬಿರಗಳನ್ನು ಸಂಘಸಂಸ್ಥೆಗಳ ಸಹಕಾರದೊಂದಿಗೆ ಸಂಘಟಿಸಿ ಸಮುದಾಯದ ಸಂಪರ್ಕವನ್ನು ಈ ಶಾಲೆಯು ಗಳಿಸಿದೆ ಎಂದು ಜಿಲ್ಲಾ ಪಂಚಾಯತಿ ಸದಸ್ಯ ಮಂಜುಳಾ ಮಾವೆ ಹೇಳಿದರು.
ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಬದಲ್ಲಿ ನಡೆದ ಸಮುದಾಯದತ್ತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು..
ತಾ.ಪಂ. ಸದಸ್ಯೆ ಗೀತ ಚಂದ್ರಶೇಖರ್ ಮಾತನಾಡಿ ಸರಕಾರದ ಅನುದಾನವನ್ನು ಕಾಯದೆ ಶಾಲಾ ಪೋಷಕರ, ಸಂಘ-ಸಂಸ್ಥೆಗಳ, ದಾನಿಗಳ ನೆರವಿನಿಂದ ಶಾಲೆಯು ಅಭಿವೃದ್ಧಿ ಮಾಡಲು ಸಾಧ್ಯ ಎಂದು ಮಾಜಿ ಶಾಲೆಯು ತೋರಿಸಿಕೊಟ್ಟಿದೆ. ಪ್ರಸಕ್ತ ಸಾಲಿನಲ್ಲಿ ತನ್ನ ಅನುದಾನದಿಂದ ೫೦ ಸಾವಿರ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸಂಜೀವ ಮೂಲ್ಯ ವಹಿಸಿದ್ದರು .
ವೇದಿಕೆಯಲ್ಲಿ ಕಲ್ಲಡ್ಕ ರೈತರ ಸಹಕಾರಿ ಸೇವಾ ಸಂಘದ ನಿರ್ದೇಶಕ ಕೊರಗಪ್ಪ ನಾಯ್ಕ ಸಿಂಗೆರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶಗೌಡ ಮೈರ, ವೀರಕಂಬ ಗ್ರಾಮ ಪಂಚಾಯತಿ ಸದಸ್ಯ ರಾಮಚಂದ್ರ ಪ್ರಭು, ಬಂಟ್ವಾಳ ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಮಾಜಿ ಅಧ್ಯಕ್ಷ ಲಕ್ಷ್ಮಣ ಅಗ್ರಬೈಲು ಉಪಸ್ಥಿತರಿದ್ದರು. ಶಿಕ್ಷಕ ನಾರಾಯಣ ಪೂಜಾರಿ ಸ್ವಾಗತಿಸಿ, ಶಿಕ್ಷಕಿ ಸಂಗೀತ ಶರ್ಮ ಧನ್ಯವಾದವಿತ್ತರು. ಶಾಲಾ ಶಿಕ್ಷಕಿಯರು ಸಹಕರಿಸಿದರು.