ಬಂಟ್ವಾಳ: ಇದು ಬಾಲಕಿಯರಿಗಾಗಿ ನಿರ್ಮಾಣಗೊಂಡ ಹೈಟೆಕ್ ಶೌಚಾಲಯ. ಇದರಲ್ಲಿ ೪ ಸುಸಜ್ಜಿತ ಶೌಚಾಲಯ, ಒಂದು ಸ್ನಾನಗೃಹ, ೧ ವಿದೇಶಿ ಶೈಲಿಯ ಶೌಚಾಲಯವಿದೆ. ಇದ್ಯಾವುದೋ ಪಂಚತಾರ ಹೋಟೆಲ್ನಲ್ಲಿ ಕಂಡು ಬಂದದಲ್ಲ, ಬದಲಿಗೆ ಬಂಟ್ವಾಳ ತಾಲೂಕಿನ ಸಸಿದ್ದಕಟ್ಟೆಯ ಸರಕಾರಿ ಪ್ರೌಢಶಾಲೆಯಲ್ಲಿ ನಿರ್ಮಾಣಗೊಂಡಿರುವುದು.
ಮಾದರಿ ಸರ್ಕಾರಿ ಶಾಲೆಯಾಗಿ ಅಭಿವೃದ್ದಿ ಹೊಂದುತ್ತಿರುವ ಸಿದ್ದಕಟ್ಟೆ ಪ್ರೌಡಶಾಲೆಗೆ ರೋಟರಿ ಕ್ಲಬ್ ಬಂಟ್ವಾಳದ ಶಿಫಾರಸ್ಸಿನ ಮೇರೆಗೆ ನಾರ್ವೆ ದೇಶದ ಮೂರು ರೋಟರಿ ಕ್ಲಬ್ ಘಟಕಗಳ ಆರ್ಥಿಕ ನೆರವಿನಡಿ ಈ ಹೈಟೆಕ್ ಶೌಚಾಲಯ ನಿರ್ಮಾಣಗೊಂಡಿದೆ. ಶಾಲಾ ಉಪಪ್ರಾಂಶುಪಾಲರು ಹಾಗೂ ಎಸ್ಡಿಎಂಸಿ ಉಪಾಧ್ಯಕ್ಷರ ಮುತುವರ್ಜಿಯಿಂದ ರೋಟರಿ ಅನುದಾನ ಇಲ್ಲಿ ಸದ್ಬಳಕೆಯಾಗಿ ಸುಂದರವಾದ ಶೌಚಾಲಯ ಎದ್ದುನಿಂತಿದೆ.
ಶಾಲೆಯ ವಿದ್ಯಾರ್ಥಿನಿಯರಿಗಾಗಿ ಈ ಸುಸಜ್ಜಿತ ಶೌಚಾಲಯವನ್ನು ನಿರ್ಮಿಸಲಾಗಿದೆ. ಶೌಚಾಲಯದೊಳಗೆ ವಿದ್ಯುತ್ ಚಾಲಿತ ಹಾಗೂ ಮಾನವ ನಿರ್ವಹಣೆಯ ನ್ಯಾಪ್ಕಿನ್ ಬರ್ನರ್ಗಳನ್ನು ಅಳವಡಿಸಲಾಗಿದೆ. ಆಕರ್ಷಕ ವಾಷ್ಬೇಸಿನ್, ಕನ್ನಡಿಯನ್ನು ಜೋಡಿಸಲಾಗಿದ್ದು ಶೌಚಾಲಯದ ಸುತ್ತ ಇಂಟರ್ಲಾಕ್ ಅಳವಡಿಸಲಾಗಿದೆ. ಕ್ರೀಡಾಕೂಟ ಮತ್ತಿತರ ಸಂದರ್ಭಗಳಲ್ಲಿ ವಿದ್ಯಾರ್ಥಿನಿಯರಿಗೆ ಸ್ನಾನ ಮಾಡಬೇಕಾದ ಅವಶ್ಯಕತೆ ಬಂದಲ್ಲಿ ಸುಸಜ್ಜಿತವಾದ ಸ್ನಾನ ಗೃಹವನ್ನು ನಿರ್ಮಿಸಲಾಗಿದೆ. ಇದರಲ್ಲಿ ಶವರ್, ಬಿಸಿ ಹಾಗೂ ತಣ್ಣೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ವಿಶೇಷ ಶೌಚಾಲಯ ಹಾಗೂ ೧೦೦ ಲೀಟರ್ ಸಾಮಾರ್ಥ್ಯದ ಶುದ್ದ ಕುಡಿಯುವ ನೀರಿನ ಘಟಕವನ್ನು ಇದೇ ಅನುದಾನದಡಿ ಅನುಷ್ಠಾನ ಮಾಡಲಾಗಿದೆ.
ರೋಟರಿ ಕ್ಲಬ್ ವತಿಯಿಂದ ನೀಡಲಾದ ಈ ಮೂರು ಕೊಡುಗೆಗಳನ್ನು ರೋಟರಿ ವಲಯ ೪ರ ಸಹಾಯಕ ಗವರ್ನರ್ ರಿತೇಶ್ ಬಾಳಿಗ ಬುಧವಾರ ಉದ್ಘಾಟಿಸಿದರು. ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಸಿದ್ದಕಟ್ಟೆ ಸರಕಾರಿ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್ ಮುಖಾಂತರ ಸಾಕಷ್ಟು ಅಭಿವೃದ್ದಿ ಕಾರ್ಯಗಳು ನಡೆದಿದೆ. ಇದೀಗ ನಾರ್ವೆ ದೇಶದ ಮೂರು ರೋಟರಿ ಕ್ಲಬ್ಗಳ ಸಹಯೋಗದೊಂದಿಗೆ ಇಲ್ಲಿ ಬಾಲಕಿಯರಿಗಾಗಿ ಸುಸಜ್ಜಿತ ಶೌಚಾಲಯವನ್ನು ನಿರ್ಮಿಸಲಾಗಿದೆ. ಇಲ್ಲಿನ ಇಂಟರಾಕ್ಟ್ ಕ್ಲಬ್ ಉತ್ತಮ ಕೆಲಸವನ್ನು ಮಾಡುತ್ತಿದ್ದು ಶಾಲೆಯ ಉಪಪ್ರಾಂಶುಪಾಲರು ಹಾಗೂ ಶಿಕ್ಷಕರ ಸಹಕಾರದಿಂದ ಇದೆಲ್ಲವೂ ಸಾಧ್ಯವಾಗಿದೆ ಎಂದರು.
ಕೆಲ ಸಮಯದ ಹಿಂದೆ ವಿದೇಶಿ ರೋಟರಿ ಕ್ಲಬ್ ಸದಸ್ಯರು ಸಿದ್ದಕಟ್ಟೆ ಶಾಲೆಗೆ ಭೇಟಿ ನೀಡಿದ್ದು ಶಾಲೆಯ ಇಂಟರಾಕ್ಟ್ ಕ್ಲಬ್ನ ಮಾರ್ಗದರ್ಶಕ ಶಿಕ್ಷಕ ಮಹೇಶ್ ವಿ.ಕರ್ಕೇರಾ ಇವರ ನೇತೃತ್ವದಲ್ಲಿ ನಡೆದ ಇಂಟರಾಕ್ಟ್ ಕ್ಲಬ್ನ ಸಾಧನೆ ಹಾಗೂ ಶಿಕ್ಷಕರ ಪರಿಶ್ರಮ, ಶಿಸ್ತುಬದ್ದ ವಾತವರಣದಲ್ಲಿ ವಿದ್ಯಾರ್ಥಿಗಳ ಕಲಿಕಾ ಪ್ರಗತಿ ಹಾಗೂ ಶಾಲಾ ಉಪಪ್ರಾಂಶುಪಾಲ ರಮಾನಂದ ಅವರ ಗುಣಾತ್ಮಕ ನಾಯಕತ್ವವನ್ನು ಪರಿಗಣಿಸಿ ರೋಟರಿ ಸಂಸ್ಥೆ ಶಾಲೆಯ ಮೂಲಭೂತ ಸೌಕರ್ಯಕ್ಕಾಗಿ ಈ ಆರ್ಥಿಕ ಸಹಕಾರವನ್ನು ನೀಡಿದೆ. ಉದ್ಘಾಟನಾ ಸಮಾರಂಭದಲ್ಲಿ ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷೆ ಶಿವಾನಿ ಬಾಳಿಗ, ಕಾರ್ಯದರ್ಶಿ ಸ್ಮಿತಾ ಸಲ್ದಾನ, ಸದಸ್ಯರಾದ ಡಾ. ರಮೇಶಾನಂದ ಸೋಮಯಾಜಿ, ಗಣೇಶಾನಂದ ಸೋಮಯಾಜಿ, ನವೀನ್ ಸಲ್ದಾನ, ಮಹಮ್ಮದ್ ಇಕ್ಬಾಲ್, ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷ ಉಮೇಶ್ ಗೌಡ, ತಾ.ಪಂ.ಸದಸ್ಯ ಪ್ರಭಾಕರ ಪ್ರಭು. ಗ್ರಾ.ಪಂ.ಸದಸ್ಯರಾದ ಶ್ರೀಧರ ಎಸ್.ಪಿ., ಮಾಧವ ಶೆಟ್ಟಿಗಾರ್, ಸುರೇಶ್ ಕುಲಾಲ್, ಎಸ್ಡಿಎಂಸಿ ಸದಸ್ಯರಾದ ಮಾಧವ ಪರವ, ಮಹೆಶ್ ಗೌಡ, ಕರುಣಾಕರ ಗೌಡ, ನಾರಾಯಣ ನಾಯ್ಕ್, ಉಪಪ್ರಾಂಶುಪಾಲ ರಮಾನಂದ ಹಾಗೂ ಸಹಶಿಕ್ಷಕರು ಉಪಸ್ಥಿತರಿದ್ದರು.